ಮೈಸೂರು: ವ್ಯಕ್ತಿಯೊಬ್ಬರ ಬರ್ಬರ ಹತ್ಯೆಯಾಗಿದ್ದು, ಪ್ರೇಯಸಿಯ ಮೇಲೆ ಸಂಶಯ ವ್ಯಕ್ತವಾಗಿದೆ.
ಈ ಘಟನೆ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅನುಗನಹಳ್ಳಿಯಲ್ಲಿ ನಡೆದಿದೆ. ಸೂರ್ಯ ಕೊಲೆಯಾಗಿರುವ ವ್ಯಕ್ತಿ. ಕೊಲೆಯಾಗಿರುವ ಸೂರ್ಯಗೆ ಮದುವೆಯಾಗಿದ್ದರೂ ಮತ್ತೋರ್ವಳೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ. ಪ್ರೇಯಸಿ ಬಿಡುವಂತೆ ಕುಟುಂಬಸ್ಥರು ಬುದ್ಧಿ ಹೇಳಿದ್ದರು. ಆದರೂ ಸೂರ್ಯ ಬದಲಾಗಿರಲಿಲ್ಲ. ಹೀಗಾಗಿ ಸೂರ್ಯನ ಪತ್ನಿ ಹಾಗೂ ತಾಯಿ ಮನೆ ಬಿಟ್ಟು ಹೋಗಿದ್ದರು.
ಇನ್ ಸ್ಟಾಗ್ರಾಮ್ ನಲ್ಲಿ ಶ್ವೇತಾ ಅನ್ನುವವಳನ್ನು ಪರಿಚಯ ಮಾಡಿಕೊಂಡಿದ್ದ ಸೂರ್ಯ ನಂತರ ಅವಳೊಂದಿಗೆ ಸಂಬಂಧದಲ್ಲಿದ್ದ ಎನ್ನಲಾಗಿದೆ. ಮೊದಲು ಚೆನ್ನಾಗಿಯೇ ಇದ್ದ ಶ್ವೇತಾ, ಹಣ, ಆಸ್ತಿಯ ಹಿಂದೆ ಬೆನ್ನು ಬಿದ್ದಿದ್ದಾಳೆ. ಹಣಕ್ಕೆ ಪೀಡಿಸುತ್ತಿರುವ ವಿಚಾರವನ್ನ ಕುಟುಂಬಸ್ಥರಿಗೂ ಸೂರ್ಯ ತಿಳಿಸಿದ್ದ. ಈ ವಿಚಾರವಾಗಿ ಶ್ವೇತಾ ಹಾಗೂ ಸೂರ್ಯನ ಮಧ್ಯೆ ಸಾಕಷ್ಟು ಬಾರಿ ಗಲಾಟೆ ಕೂಡ ನಡಿದಿದೆ ಎನ್ನಲಾಗಿದೆ.
ಗುರುವಾರ ರಾತ್ರಿ ಕೂಡ ಶ್ವೇತಾ ಹಾಗೂ ಸೂರ್ಯ ಜೊತೆಗಿದ್ದರು ಎನ್ನಲಾಗಿದೆ. ಆದರೆ, ಬೆಳಗಾಗುವಷ್ಟರಲ್ಲಿ ಸೂರ್ಯನ ಕೊಲೆಯಾಗಿದೆ. ಹೀಗಾಗಿ ಶ್ವೇತಾ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.