ದಾವಣಗೆರೆ: ವ್ಯಕ್ತಿಯೊಬ್ಬ ಜೈಲು ಶಿಕ್ಷೆಯ ಭಯದಿಂದಾಗಿ ನ್ಯಾಯಾಲಯದಲ್ಲಿಯೇ (Court) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಫಜಲ್ ಅಲಿ (38) ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಈತ ಶನಿವಾರ ದಾವಣಗೆರೆ ಜಿಲ್ಲೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರಾಗಿದ್ದ. ಈ ಸಂದರ್ಭದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿಯೇ ವಿಷ ಸೇವಿಸಿ ತೀವ್ರ ಅಸ್ವಸ್ಥನಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಪಿ ಫಜಲ್ ಅಲಿ ಹಾಗೂ ಆತನ ಪತ್ನಿ ವಿಚ್ಚೇಧನ ಪಡೆದಿದ್ದರು. ನಂತರ ಕೋರ್ಟ್ ಆದೇಶದಂತೆ ಪತ್ನಿಗೆ ಜೀವನಾಂಶ ನೀಡಬೇಕಾಗಿತ್ತು. ಆದರೆ, ಪತಿ ಮಾತ್ರ ಜೀವನಾಂಶ ನೀಡಿರಲಿಲ್ಲ. ಹೀಗಾಗಿ ಪತ್ನಿ ಪರ ನ್ಯಾಯವಾದಿಗಳು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.
ನ್ಯಾಯಾಧೀಶರಿಂದ ಜೈಲಿಗೆ ಹಾಕುವ ಆದೇಶ ಬರುವ ಭಯದಿಂದ ಕೋರ್ಟ್ಗೆ ಬರುವ ಸಂದರ್ಭದಲ್ಲಿ ವಿಷದ ಬಾಟಲ್ ಇಟ್ಟುಕೊಂಡು ಬಂದಿದ್ದಾನೆ. ನಂತರ ಕೋರ್ಟ್ ಹಾಲ್ ನಲ್ಲಿಯೇ ವಿಷ ಸೇವಿಸಿದ್ದಾನೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.