Mammootty: ಮಲಯಾಳಂ ಸೂಪರ್ ಸ್ಟಾರ್, ನಟ ಮಮ್ಮುಟ್ಟಿ(Mammootty) ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಯೇ? ಇದೇ ಕಾರಣಕ್ಕಾಗಿ ಅವರು ಚಲನಚಿತ್ರಗಳಿಂದ ದೂರವಿದ್ದಾರೆಯೇ?
73 ವರ್ಷದ ಖ್ಯಾತ ನಟನಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅದೇ ಕಾರಣಕ್ಕೆ ಅವರು ಸಿನಿಮಾದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂಬ ಹಲವಾರು ವದಂತಿಗಳು ಇತ್ತೀಚೆಗೆ ಹರಿದಾಡಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟಪಡಿಸಿರುವ ನಟ ಮಮ್ಮುಟ್ಟಿ ಅವರ ತಂಡವು, ಮಮ್ಮುಟ್ಟಿಯವರಿಗೆ ಕ್ಯಾನ್ಸರ್ ಇದೆ ಎನ್ನುವುದು ಶುದ್ಧ ಸುಳ್ಳು. ಅದನ್ನು ಯಾರೂ ನಂಬಬಾರದು ಎಂದು ಹೇಳುವ ಮೂಲಕ ವದಂತಿಗಳಿಗೆ ಅಂತ್ಯ ಹಾಡಿದೆ. ಅಲ್ಲದೆ, ಮಲಯಾಳಂ ಸೂಪರ್ ಸ್ಟಾರ್ ಸದ್ಯ ರಜೆಯಲ್ಲಿದ್ದಾರೆ. ರಂಜಾವ್ ಹಿನ್ನೆಲೆಯಲ್ಲಿ ಉಪವಾಸ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಕೆಲಸವನ್ನು ಪುನರಾರಂಭಿಸಲಿದ್ದಾರೆ ಎಂದೂ ಅವರ ತಂಡ ಹೇಳಿದೆ.
“ಇದು ಸುಳ್ಳು ಸುದ್ದಿ. ಅವರು ರಂಜಾನ್ ಉಪವಾಸ ಮಾಡುತ್ತಿರುವುದರಿಂದ ರಜೆಯಲ್ಲಿದ್ದಾರೆ. ಆ ಕಾರಣದಿಂದಾಗಿ ಅವರು ತಮ್ಮ ಶೂಟಿಂಗ್ ವೇಳಾಪಟ್ಟಿಯಿಂದ ದೂರವಿದ್ದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ವಾಸ್ತವವಾಗಿ, ವಿರಾಮದ ನಂತರ, ಅವರು ಮೋಹನ್ ಲಾಲ್ ಅವರೊಂದಿಗೆ ನಟಿಸುತ್ತಿರುವ ಮಹೇಶ್ ನಾರಾಯಣನ್ ಅವರ ಚಿತ್ರದ ಚಿತ್ರೀಕರಣಕ್ಕೆ ಮರಳಲಿದ್ದಾರೆ” ಎಂದು ನಟನ ಪಿಆರ್ ತಂಡ ತಿಳಿಸಿದೆ.

ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಅಭಿನಯದ ಮಹೇಶ್ ನಾರಾಯಣನ್ ಅವರ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಶ್ರೀಲಂಕಾದಲ್ಲಿ ಪ್ರಾರಂಭಿಸಲಾಗಿತ್ತು. ಈ ಬಹುತಾರಾಗಣದ ಚಿತ್ರವು ಮಲಯಾಳಂ ಚಲನಚಿತ್ರೋದ್ಯಮದ ಇಬ್ಬರು ದಿಗ್ಗಜ ತಾರೆಗಳಾದ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಅವರನ್ನು ಒಂದು ದಶಕದ ನಂತರ ತೆರೆಯ ಮೇಲೆ ಒಟ್ಟಿಗೆ ತರುತ್ತಿದೆ. ಸದ್ಯಕ್ಕೆ ಎಂಎಂಎಂಎನ್ (ಮಮ್ಮುಟ್ಟಿ, ಮೋಹನ್ ಲಾಲ್, ಮಹೇಶ್ ನಾರಾಯಣನ್) ಎಂದು ಹೆಸರಿಸಲಾಗಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಕುಂಚಾಕೋ ಬೋಬನ್, ನಯನತಾರಾ, ದರ್ಶನಾ ರಾಜೇಂದ್ರನ್ ಮುಂತಾದ ಪ್ರಮುಖರೂ ನಟಿಸಿದ್ದಾರೆ.
ಇತ್ತೀಚೆಗೆ, ಮಮ್ಮುಟ್ಟಿ ತಮ್ಮ ಮುಂಬರುವ ಚಿತ್ರ ಬಜೂಕಾದ ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದರು. 2023ರಲ್ಲಿ ಘೋಷಿಸಲಾದ ಈ ಚಿತ್ರವು ಅದರ ನಿರ್ಮಾಣ ಮತ್ತು ಪೋಸ್ಟ್-ಪ್ರೊಡಕ್ಷನ್ ಕಾರಣದಿಂದಾಗಿ ಹಲವಾರು ವಿಳಂಬಗಳ ನಂತರ ಏಪ್ರಿಲ್ 10, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಜೂಕಾ ಚೊಚ್ಚಲ ನಿರ್ದೇಶಕ ಡೀನೊ ಡೆನ್ನಿಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಆಗಿದ್ದು, ಗೌತಮ್ ವಾಸುದೇವ್ ಮೆನನ್, ಬಾಬು ಆಂಟನಿ, ಐಶ್ವರ್ಯಾ ಮೆನನ್, ನೀತಾ ಪಿಳ್ಳೈ, ಗಾಯತ್ರಿ ಅಯ್ಯರ್ ಮತ್ತು ಹಲವಾರು ಪ್ರಸಿದ್ಧ ನಟರು ಇದರಲ್ಲಿ ನಟಿಸಿದ್ದಾರೆ.
ಜನವರಿ 23 ರಂದು ಬಿಡುಗಡೆಯಾದ ಗೌತಮ್ ವಾಸುದೇವ್ ಮೆನನ್ ಅವರ ಇನ್‌ವೆಸ್ಟಿಗೇಟಿವ್ ಕಾಮಿಡಿ ಚಿತ್ರ ಡೊಮಿನಿಕ್ ಅಂಡ್ ದಿ ಲೇಡೀಸ್ ಪರ್ಸ್ ನಲ್ಲಿ ಮಮ್ಮುಟ್ಟಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.