ಲಂಡನ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಎಲ್ಲಿಗೇ ಹೋಗಲಿ, ಯಾವ ದೇಶಕ್ಕೇ ಭೇಟಿ ನೀಡಲಿ, ತಮ್ಮ ದಿರಸಿನಲ್ಲಿ ಮಾತ್ರ ಅವರು ಎಂದಿಗೂ ಸರಳತೆ ಮೆರೆಯುತ್ತಾರೆ. ಸೀರೆ ಹಾಗೂ ಸ್ಲಿಪ್ಪರ್ ಅವರ ಉಡುಪಿನ ಟ್ರೇಡ್ ಮಾರ್ಕ್ ಆಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಲಂಡನ್ ನಲ್ಲೂ ಮಮತಾ ಬ್ಯಾನರ್ಜಿ ಅವರು ಸೀರೆ, ಸ್ಲಿಪ್ಪರ್ ನಲ್ಲಿಯೇ ಜಾಗಿಂಗ್ ಮಾಡಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಹೌದು, ಲಂಡನ್ ನಲ್ಲಿರುವ ಬಕಿಂಗ್ ಹ್ಯಾಮ್ ಪ್ಯಾಲೆಸ್ ನಿಂದ ಹೈಡ್ ಪಾರ್ಕ್ ವರೆಗೆ ಮಮತಾ ಬ್ಯಾನರ್ಜಿ ಅವರು ಜಾಗಿಂಗ್ ಮಾಡಿದ ವೀಡಿಯೋವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಕುನಾಲ್ ಘೋಷ್ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಸೀರೆ ಧರಿಸಿ, ಸ್ಲಿಪ್ಪರ್ ನಲ್ಲಿಯೇ ಅಧಿಕಾರಿಗಳೊಂದಿಗೆ ಜಾಗಿಂಗ್ ಮಾಡಿದ್ದಾರೆ.
ಲಂಡನ್ ನಲ್ಲಿ ಮಮತಾ ಬ್ಯಾನರ್ಜಿ ಅವರು ಹಸಿರು ಬಾರ್ಡರ್ ಇರುವ ಬಿಳಿ ಸೀರೆ, ಬಿಳಿ ಸ್ಲಿಪ್ಪರ್ ಧರಿಸಿ ಜಾಗಿಂಗ್ ಮಾಡಿದ್ದಾರೆ. ಲಂಡನ್ ನಲ್ಲಿ ಭಾರಿ ಚಳಿ ಇರುವ ಕಾರಣ ಶಾಲು ಹೊದ್ದುಕೊಂಡು ಜಾಗಿಂಗ್ ಮಾಡಿದ್ದಾರೆ. ಹಾಗಂತ, ಮಮತಾ ಬ್ಯಾನರ್ಜಿ ಅವರು ಇದೇ ಮೊದಲ ಬಾರಿಗೆ ವಿದೇಶದಲ್ಲಿ ಸೀರೆ ಧರಿಸಿ, ಸ್ಲಿಪ್ಪರ್ ಹಾಕಿಕೊಂಡು ಜಾಗಿಂಗ್ ಮಾಡಿಲ್ಲ. 2023ರಲ್ಲಿ ಸ್ಪೇನ್ ಗೆ ಭೇಟಿ ನೀಡಿದಾಗಲೂ ಮಮತಾ ಬ್ಯಾನರ್ಜಿ ಅವರು ಸೀರೆ, ಸ್ಲಿಪ್ಪರ್ ನಲ್ಲೇ ಜಾಗಿಂಗ್ ಮಾಡಿದ್ದರು.
ಪಶ್ಚಿಮ ಬಂಗಾಳ ಹಾಗೂ ಬ್ರಿಟನ್ ನಡುವಿನ ಸಂಬಂಧ ವೃದ್ಧಿ, ದ್ವಿಪಕ್ಷೀಯ ಮಾತುಕತೆ ನಡೆಸಲು ಮಮತಾ ಬ್ಯಾನರ್ಜಿ ಅವರು ಭಾನುವಾರದಿಂದ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. “ಪಶ್ಚಿಮ ಬಂಗಾಳ ಹಾಗೂ ಬ್ರಿಟನ್ ನಡುವಿನ ಸಂಬಂಧ ಐತಿಹಾಸಿಕವಾದುದು” ಎಂದು ಕೂಡ ಅವರು ಬಣ್ಣಿಸಿದ್ದಾರೆ.