ಕೋಲಾರ: ಶಾಸಕ ಸ್ಥಾನ ಅಸಿಂಧುಗೊಳಿಸಿ ಮರು ಮತ ಎಣಿಕೆ ಮಾಡುವಂತೆ ಹೈಕೋರ್ಟ್ ಆದೇಶ ಮಾಡಿದ್ದು, ತುಂಬಾ ಬೇಸರ ಉಂಟಾಗಿದೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ.
ಅಸಿಂಧುಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ನಂಜೇಗೌಡ, ‘ಕ್ಷೇತ್ರದ ಮತದಾರರು ಯಾವುದೇ ಕಾರಣಕ್ಕೂ ಗಾಬರಿ ಆಗುವ ಅವಶ್ಯವಿಲ್ಲ. 30 ದಿನಗಳ ಅವಧಿಗೆ ತಡೆಯಾಜ್ಞೆಯನ್ನು ಹೈಕೋರ್ಟ್ ನೀಡಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿಸುತ್ತೇನೆ. ನಾನು ಧೈರ್ಯವಾಗಿ ಹೋರಾಟ ಮಾಡುತ್ತೇನೆ’ ಎಂದಿದ್ದಾರೆ.
‘ಶಾಸಕರಿಲ್ಲದೆ ಮಾಲೂರು ಕ್ಷೇತ್ರ ತಬ್ಬಲಿ ಆಗಿದೆ ಎಂಬುದಾಗಿ ಪರಾಜಿತ ಅಭ್ಯರ್ಥಿ ಹೇಳಿಕೊಂಡಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ನನಗೆ ಜಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಂಜೇಗೌಡ ಅವರ ಆಯ್ಕೆ ಪ್ರಶ್ನಿಸಿ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಮಂಜುನಾಥಗೌಡ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಮತ ಎಣಿಕೆಯಲ್ಲಿ ಲೋಪವುಂಟಾಗಿದ್ದು, ನಂಜೇಗೌಡ ಆಯ್ಕೆ ಅಸಿಂಧುಗೊಳಿಸಬೇಕು, ಮರ ಮತ ಎಣಿಕೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಆಯ್ಕೆ ಅಸಿಂಧುಗೊಳಿಸಿ ಆದೇಶ ನೀಡುತ್ತಿದ್ದಂತೆಯೇ ಇದಕ್ಕೆ ತಡೆ ನೀಡುವಂತೆ ನಂಜೇಗೌಡರ ಪರ ವಕೀಲರು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, 30 ದಿನಗಳವರೆಗೆ ತನ್ನದೇ ತೀರ್ಪಿಗೆ ತಡೆ ನೀಡಿದೆ.