ಮಂಗಳೂರು : ಮಂಗಳೂರಿನ ಕ್ಯಾಬ್ ಚಾಲಕರೊಬ್ಬರಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದ ಮೇಲೆ ಮಲಯಾಳಂ ಚಿತ್ರರಂಗದ ಹಿರಿಯ ನಟ ಜಯಕೃಷ್ಣನ್ ಅವರನ್ನು ಬಂಧಿಸಲಾಗಿದೆ.
ಸೆ.09ರಂದು ಮಂಗಳೂರಿಗೆ ಬಂದಿದ್ದ ನಟ ಜಯಕೃಷ್ಣನ್, ಸಂತೋಷ್ ಅಬ್ರಾಹಂ ಮತ್ತು ವಿಮಲ್ ಎಂಬುವರು ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಮಂಗಳೂರಿನ ಬಿಜೈ ನ್ಯೂ ರೋಡ್‌ನಿಂದ ಪಿಕಪ್ ಆಡ್ರೆಸ್ ನೀಡಲಾಗಿತ್ತು. ಇದನ್ನು ನೋಡಿ ಕ್ಯಾಬ್ ಚಾಲಕ ಅಹ್ಮದ್ ಶಫೀಕ್, ಆ್ಯಪ್ ಮೂಲಕ ಕಾಲ್ ಮಾಡಿ ಪಿಕಪ್ ಬಗ್ಗೆ ವಿಚಾರಿಸಿದ್ದಾರೆ.
ಈ ವೇಳೆ ನಟ ಮೊದಲು ಹಿಂದಿಯಲ್ಲಿ ಮಾತನಾಡಿದ್ದಾರೆ. ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ, ಮಲಯಾಳಂನಲ್ಲಿ ಮಾತನಾಡುವಂತೆ ಜಯಕೃಷ್ಣನ್ ಸೂಚಿಸಿದ್ದರು. ಬಳಿಕ ಮಲಯಾಳಂನಲ್ಲಿ ಮಾತನಾಡದ ಚಾಲನಕನಿಗೆ ‘ಮುಸ್ಲಿಂ ತೀವ್ರವಾದಿ, ಟೆರರಿಸ್ಟ್’ ಎಂದು ಅಪಹಾಸ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ‘ಮುಸ್ಲಿಂ ಟೆರರಿಸ್ಟ್’ ಎಂದು ಹಿಂದಿ ಭಾಷೆಯಲ್ಲಿ ಕೂಗಾಡಿ, ನಂತರ ಮಲಯಾಳಂ ಭಾಷೆಯಲ್ಲಿ ಕ್ಯಾಬ್ ಚಾಲಕನ ತಾಯಿಗೆ ಅವಾಚ್ಯವಾಗಿ ಬೈದಿರುತ್ತಾರೆ ಎಂದು ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಹ್ಮದ್ ಶಫೀಕ್ ನೀಡಿದ ದೂರಿನ ಆಧಾರದ ಮೇಲೆ, ಬಿಎನ್‌ಎಸ್ ಸೆಕ್ಷನ್ 352 ಮತ್ತು 353 (2) ರ ಅಡಿಯಲ್ಲಿ ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2025 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆ ನಡೆಸಿದ ಪೊಲೀಸರು ನಟನನ್ನು ಬಂಧಿಸಿದ್ದಾರೆ.
ಜಯಕೃಷ್ಣನ್ ಅವರು 1994ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದು, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.