ತಿರುವನಂತಪುರಂ: ಮಲಯಾಳಂನಲ್ಲಿ ಈಗ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳದ್ದೇ ಸದ್ದು ಎನ್ನುವಂತಾಗಿದೆ. ಈ ಮಧ್ಯೆ ಈಗ ಖ್ಯಾತ ನಟನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ.
ಜಸ್ಟೀಸ್ ಹೇಮಾ ಸಮಿತಿ ವರದಿಯ ನಂತರ ಅಲ್ಲಿ ನಟಿಯರ ಮೇಲಿನ ದೌರ್ಜನ್ಯಗಳು ಸದ್ದು ಮಾಡುತ್ತಿವೆ. ಈ ವರದಿಯಲ್ಲಿ ಹಲವಾರು ಬೆಚ್ಚಿ ಬೀಳಿಸುವ ಅಂಶಗಳು ದಾಖಲಾಗಿವೆ. ಈ ವರದಿ ಸಲ್ಲಿಕೆಯಾಗುತ್ತಿದ್ದಂತೆ ಮಲೆಯಾಳಂ ಸಿನಿಮಾದಲ್ಲಿನ ಲೈಂಗಿಕ ಹಗರಣಗಳ ಕರಾಳ ಮುಖ ಹೊರ ಬೀಳಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ನಟರ ಸಂಘದ ಅಧ್ಯಕ್ಷ ಮೋಹನ್ ಲಾಲ್ ಸೇರಿದಂತೆ ಎಲ್ಲ 16 ಪದಾಧಿಕಾರಿಗಳು ರಾಜೀನಾಮೆ ಕೂಡ ನೀಡಿದ್ದಾರೆ.
ಪ್ರತಿದಿನ ಒಂದಿಲ್ಲ ಒಬ್ಬ ನಟರ ಮುಖವಾಡ ಕಳಚಿ ಬೀಳುತ್ತಿದೆ. ಈಗ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿವಿನ್ ಪೌಲಿ ಹಾಗೂ ಇತರ ಐವರ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.
2023ರಲ್ಲಿ ನಿವಿನ್ ಪೌಲಿ ಹಾಗೂ ಇನ್ನಿತರರು ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ದುಬೈನಲ್ಲಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ಮಾಪಕ ಎಕೆ ಸುನಿಲ್, ಶ್ರೇಯ್, ಬಿನು, ಬಶೀರ್ ಕುಟ್ಟನ್ ಹಾಗೂ ನಿವಿನ್ ಪೌಲಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ನಟ ನವಿನ್ ಪೌಲಿ, ನಾನು ತಪ್ಪು ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಸತ್ಯ ಹಾಗೂ ನ್ಯಾಯಕ್ಕಾಗಿ ಕಾನೂನಿನಡಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.