ಪಾಟ್ನಾ: ನಿಮಗೆ ವಿದೇಶದಿಂದ ದೊಡ್ಡ ಮೊತ್ತದ ಗಿಫ್ಟ್ ಬಂದಿದೆ, ಕಸ್ಟಮ್ಸ್ ಸುಂಕ ಕಟ್ಟಿ, ಗಿಫ್ಟ್ ಪಡೆಯಿರಿ, ನೀವು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ, ಒಂದೇ ತಿಂಗಳಲ್ಲಿ ಡಬಲ್ ಗಳಿಸಿ ಎಂಬುದು ಸೇರಿ ಹಲವು ರೀತಿಯಲ್ಲಿ ಜನರನ್ನು ಸೈಬರ್ ವಂಚಕರು ಸುಲಿಗೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಬಿಹಾರದಲ್ಲೊಂದು ಪ್ರಳಯಾಂತಕ ಸೈಬರ್ ವಂಚನೆ ಜಾಲ ಹುಟ್ಟಿಕೊಂಡಿದೆ. ಹೆಣ್ಣುಮಕ್ಕಳನ್ನು ಗರ್ಭಿಣಿಯನ್ನಾಗಿ ಮಾಡಿ, ಲಕ್ಷಾಂತರ ರೂ. ಗಳಿಸಿ ಎಂದು ಸೈಬರ್ ಕ್ರಿಮಿನಲ್ ಗಳು ಪುರುಷರನ್ನು ವಂಚಿಸುತ್ತಿರುವ ಜಾಲ ಬಯಲಾಗಿದೆ.
ಮುಕೇಶ್ ವಂಚನೆಗೀಡಾಗಿದ್ದು ಹೇಗೆ?
ಹೌದು, ಬಿಹಾರದ ನವಾಡ ಜಿಲ್ಲೆಯಲ್ಲಿ ಇಂತಹದ್ದೊಂದು ಜಾಲ ಹುಟ್ಟಿಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ಮುಕೇಶ್ ಎಂಬಾತನಿಗೆ ಫೇಸ್ ಬುಕ್ ನಲ್ಲಿ ಯುವತಿಯಿಂದ ಮೆಸೇಜ್ ಬಂದಿದೆ. ಮಹಿಳೆಯೊಬ್ಬರನ್ನು ಗರ್ಭಿಣಿಯನ್ನಾಗಿ ಮಾಡಬೇಕು. ಇದರಿಂದ ನಿಮಗೆ 15 ಲಕ್ಷ ರೂ. ಸಿಗುತ್ತದೆ ಎಂದು ಸಂಪರ್ಕ ಮಾಡಿದ್ದಾರೆ. ಮುಕೇಶ್ ಪತ್ನಿಯು ಡೆಲಿವರಿಗಾಗಿ ತವರು ಮನೆಗೆ ತೆರಳಿದ್ದರಿಂದ “ಇನ್ನೇನು ಮಾಡುವುದು” ಎಂಬ ಯೋಚನೆಯಲ್ಲಿದ್ದ ಮುಕೇಶ್, ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದಾನೆ.
ಮಹಿಳೆಯೊಬ್ಬರನ್ನು ಗರ್ಭಿಣಿ ಮಾಡುವುದಾಗಿ ಮುಕೇಶ್ ಒಪ್ಪಿಕೊಂಡಿದ್ದಾನೆ. ಬಳಿಕ ಸೈಬರ್ ವಂಚಕರು ಮುಕೇಶ್ ಬ್ಯಾಂಕ್ ಡಿಟೇಲ್ಸ್ ಸೇರಿ ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ಮಹಿಳೆ ಗರ್ಭಿಣಿಯಾದರೆ ನಿಮಗೆ 15 ಲಕ್ಷ ರೂ. ಕೊಡುತ್ತೇವೆ ಎಂದಿದ್ದಾರೆ. ಇದಾದ ಬಳಿಕ ಸೈಬರ್ ವಂಚಕರು ಮುಕೇಶ್ ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲ ಹಣವನ್ನು ಲಪಟಾಯಿಸಿದ್ದಾರೆ.
11 ಮಂದಿಯ ಬಂಧನ
ನವಾಡ ಡಿಎಸ್ ಪಿ ಪ್ರಿಯಾ ಜ್ಯೋತಿ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. “ನವಾಡ ಜಿಲ್ಲೆಯಲ್ಲಿ ಇಂತಹದ್ದೊಂದು ವಂಚನೆ ಜಾಲ ಹುಟ್ಟಿಕೊಂಡಿದೆ. ಕಳೆದ ವರ್ಷ ಎಂಟು ಹಾಗೂ ಈ ವರ್ಷ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಜಾಲತಾಣಗಳ ಮೂಲಕ ಪುರುಷರನ್ನು ಸಂಪರ್ಕಿಸುವ ಇವರು, ಮಹಿಳೆಯೊಬ್ಬರನ್ನು ಗರ್ಭಿಣಿಯನ್ನಾಗಿ ಮಾಡಬೇಕು. ಇದರಿಂದ ಹಣ ನೀಡುತ್ತೇವೆ ಎಂಬ ಆಮಿಷವೊಡ್ಡಿ ವಂಚಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.