ಅಮ್ಮಿನಬಾವಿ ಜಿನಾಲಯದ ದಶಲಕ್ಷಣ ಪರ್ವದಲ್ಲಿ ಲೇಖಕ ಯರಗಂಬಳಿಮಠ ಪ್ರತಿಪಾದನೆ
ಧಾರವಾಡ : ದೇಹದ ಆರೋಗ್ಯಕ್ಕೆ ಮಾರಕವಾಗುವ ಆಹಾರ ಪದಾರ್ಥಗಳನ್ನು ಸೇವಿಸದೇ ಪಥ್ಯವಾಗಿಸುವಂತೆ ನಮ್ಮ ಜೀವನ ವಿಧಾನಕ್ಕೆ ಮಾರಕವಾಗಿರುವ ಮಿಥ್ಯವನ್ನು ಸಂಪೂರ್ಣ ಪಥ್ಯವಾಗಿಸಿ, ಬದುಕನ್ನು ಶುಭ್ರಗೊಳಿಸುವ ಸತ್ಯದ ಅನುಪಾಲನೆಯನ್ನು ನಿತ್ಯವಾಗಿಸಿಕೊಳ್ಳಲು ಲೇಖಕ ಗುರುಮೂರ್ತಿ ಯರಗಂಬಳಿಮಠ ಮನವಿ ಮಾಡಿದರು.
ಅವರು ತಾಲೂಕಿನ ಅಮ್ಮಿನಬಾವಿಯ ಶ್ರೀನೇಮಿನಾಥ ಜಿನಾಲಯದಲ್ಲಿ ಹಮ್ಮಿಕೊಂಡಿರುವ ದಶಲಕ್ಷಣ ಪರ್ವದ ಆಚರಣೆಯಲ್ಲಿ ‘ಉತ್ತಮ ಸತ್ಯ ಧರ್ಮ’ ಕುರಿತು ಪ್ರಧಾನ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಸತ್ಯವು ಕೇವಲ ಕಂಠ ಭೂಷಣವಾಗದೇ ಅದು ಆತ್ಮ ಭೂಷಣವಾಗಬೇಕು. ನಮ್ಮ ಮಾತು ಮತ್ತು ಕೃತಿಗಳೆರಡಲ್ಲಿಯೂ ಸತ್ಯದ ಸಾಮ್ಯತೆ ಇರಬೇಕು. ಅನಂತವಾದ ಶಕ್ತಿ ಸಂಚಯ ಹೊಂದಿರುವ ಆತ್ಮಕ್ಕೆ ಸತ್ಯವು ಸದಾ ಹತ್ತಿರವಾಗಿರುತ್ತದೆ. ಹಾಗಾಗಿ ಸತ್ಯ ಧರ್ಮವೆಂದರೆ ಅದು ಆತ್ಮ ಧರ್ಮ, ಅದುವೇ ಜಿನಧರ್ಮವಾಗಿದೆ ಎಂದರು.
ಸತ್ಯದ ಅನುಸಂಧಾನ : ತಮ್ಮ ಬದುಕಿನುದ್ದಕ್ಕೂ ಸತ್ಯದ ಅನುಸಂಧಾನಕ್ಕೆ ತೆರದುಕೊಂಡು ಸತ್ಯ, ಶಾಂತಿ, ಅಹಿಂಸೆಗಳ ನೆಲೆಯ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗೆಲುವನ್ನು ಕಂಡಿದ್ದ ಮಹಾತ್ಮಾ ಗಾಂಧೀಜಿ ತಮ್ಮ ಆತ್ಮಕಥನಕ್ಕೆ ‘ನನ್ನ ಸತ್ಯಾನ್ವೇಷಣೆ’ ಎಂದಿದ್ದಾರೆ ಎಂದೂ ಯರಗಂಬಳಿಮಠ ನುಡಿದರು.
ಜಿನತಪಸ್ವಿನಿ ಗಣಿನಿ ಆರ್ಯೀಕಾರತ್ನ ಶ್ರೀಜಿನವಾಣಿ ಮಾತಾಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಆರ್ಯೀಕಾ ಶ್ರೀವಿನಮ್ರಜ್ಯೋತಿ ಮಾತಾಜಿ, ಕ್ಷುಲ್ಲೀಕಾ ಶ್ರೀಅಮೃತಜ್ಯೋತಿ ಮಾತಾಜಿ ಹಾಗೂ ಕ್ಷುಲ್ಲೀಕಾ ಶ್ರೀಅಚಲಜ್ಯೋತಿ ಮಾತಾಜಿ ಸಹಸಾನ್ನಿಧ್ಯವಹಿಸಿದ್ದರು.
ಪಾಶ್ವನಾಥ ದೇಸಾಯಿ ಗೋಷ್ಠಿ ಉದ್ಘಾಟಿಸಿದರು. ಆನಂದ ಗಡೇಕಾರ ಅತಿಥಿಯಾಗಿದ್ದರು. ಮಂಜುನಾಥ ಅಂಗಡಿ ಅಧ್ಯಕ್ಷತೆವಹಿಸಿದ್ದರು. ಜೈನ್ ಸಮಾಜ ಟ್ರಸ್ಟ್ ಅಧ್ಯಕ್ಷ ಟಿ.ಎಂ.ದೇಸಾಯಿ, ಶಂಕರ ರಾಘೂನವರ, ಶ್ರೇಯಾಂಶ ದೇಸಾಯಿ, ಪಮ್ಮಣ್ಣ ಧಾರವಾಡ, ದೀಪಕ ದೇಸಾಯಿ, ಈಶ್ವರ ಗಡೇಕಾರ, ಮಹಾವೀರ ದೇಸಾಯಿ, ಭೀಮಪ್ಪ ಜಗಾಪೂರ, ಮಂಜುನಾಥ ಗುಡ್ಡದಮನಿ, ಮಹಾವೀರ ಬಳಿಗೇರ ಇದ್ದರು. ಪಿ.ಎಸ್. ಪತ್ರಾವಳಿ ಸ್ವಾಗತಿಸಿದರು. ಶಿಲ್ಪಾ ಅಣ್ಣಿಗೇರಿ ನಿರೂಪಿಸಿದರು. ಸುರೇಖಾ ಬಾವಿ ವಂದಿಸಿದರು.
ಧಾರವಾಡ ತಾಲೂಕು ಅಮ್ಮಿನಬಾವಿಯ ಶ್ರೀನೇಮಿನಾಥ ಜಿನಾಲಯದಲ್ಲಿ ಶ್ರೀಜಿನವಾಣಿ ಮಾತಾಜಿ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ದಶಲಕ್ಷಣ ಪರ್ವದ ಆಚರಣೆಯಲ್ಲಿ ‘ಉತ್ತಮ ಸತ್ಯ ಧರ್ಮ’ ಗೋಷ್ಠಿಯನ್ನು ಪಾಶ್ವನಾಥ ದೇಸಾಯಿ ಉದ್ಘಾಟಿಸಿದರು. ಶ್ರೇಯಾಂಶ ದೇಸಾಯಿ, ಗುರುಮೂರ್ತಿ ಯರಗಂಬಳಿಮಠ, ಮಂಜುನಾಥ ಅಂಗಡಿ, ಪಿ.ಎಸ್. ಪತ್ರಾವಳಿ ಹಾಗೂ ಟಿ.ಎಂ.ದೇಸಾಯಿ ಇದ್ದರು.