ಉಡುಪಿ :ಇಂದು ನಾಡಿನಾದ್ಯಂತ ಮಕರ ಸಂಕ್ರಾಂತಿ ಸಡಗರ ಮನೆಮಾಡಿದ್ದು, ಉಡುಪಿಯ ಪವಿತ್ರ ಶ್ರೀಕೃಷ್ಣ ಮಠದಲ್ಲಿಯೂ ವಿಶೇಷ ಹಬ್ಬದ ಮೆರುಗು ಬಂದಿದೆ. ಸುಮಾರು 800 ವರ್ಷಗಳ ಹಿಂದೆ ಜಗದ್ಗುರು ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಇದೇ ಮಕರ ಸಂಕ್ರಾಂತಿಯ ಶುಭ ದಿನದಂದೇ ಪ್ರತಿಷ್ಠಾಪಿಸಿದ್ದರು. ಈ ಹಿನ್ನಲೆಯಲ್ಲಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಮಕರ ಸಂಕ್ರಾಂತಿಯಂದು ಮೂರು ತೇರಿನ ಉತ್ಸವ ಅದ್ದೂರಿಯಾಗಿ ನಡೆಯಿತು.

ಬ್ರಹ್ಮರಥದಲ್ಲಿ ಶ್ರೀಕೃಷ್ಣ, ಗರುಡರಥದಲ್ಲಿ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ, ಮಹಾಪೂಜಾ ರಥೋತ್ಸವದಲ್ಲಿ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಇರಿಸಿ ಅದ್ದೂರಿಯಾಗಿ ಆಚರಿಸಲಾಯಿತು. ಇದಕ್ಕೂ ಮುನ್ನ ಪಾರ್ಥಸಾರಥಿ ಅಲಂಕಾರದ ತೆಪ್ಪದಲ್ಲಿ ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆಯಿತು.

ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ಭಾವೀ ಪರ್ಯಾಯ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ :ನಡುರಾತ್ರಿ ಪತ್ನಿ, ಮಗಳು, ಅತ್ತೆ ಮೇಲೆ ಹಲ್ಲೆ.. ಅಸಹಾಯಕತೆಯಿಂದ ಬೀದಿಗೆ ಓಡಿಬಂದ ಮೂವರು | ವಿಶು ಶೆಟ್ಟಿ ಅಂಬಲಪಾಡಿಯಿಂದ ರಕ್ಷಣೆ



















