ಚಿಕ್ಕಮಗಳೂರು : ಭಾರೀ ಮಳೆಗೆ ರೈಲ್ವೆ ಹಳಿಗೆ ಹಾಕಿದ್ದ ಜಲ್ಲಿ ಕಲ್ಲು ಕೊಚ್ಚಿ ಹೋಗಿದ್ದು, ಈ ನಡುವೆ ರೈಲ್ವೇ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುವೊಂದು ತಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಣಿವೆ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಲ್ಕು ದಿನಗಳಿಂದ ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ತಾಲೂಕಿನ ಕಣಿವೆ ಗ್ರಾಮದಲ್ಲಿ ರೈಲ್ವೇ ಹಳಿ ಲಯ ತಪ್ಪಿ ಹಳಿಗೆ ಹಾಕಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿತ್ತು.
ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ಕಾಲುವೆಯ ನೀರು ಉಕ್ಕಿ ಹರಿದ ಪರಿಣಾಮ ಹಳಿಯಲ್ಲಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿದ್ದವು. ಈ ನಡುವೆ ಇಂದು ಬೆಳಗ್ಗೆ ಚಿಕ್ಕಮಗಳೂರಿನಿಂದ ಶಿವಮೊಗ್ಗ ಕಡೆಗೆ ಹೊರಟ್ಟಿದ್ದ ಪ್ಯಾಸೆಂಜರ್ ರೈಲು ಕಣಿವೆ ಬಳಿ ಆಗಮಿಸಿದೆ. ಈ ವೇಳೆ ರೈಲ್ವೇ ಸಿಬ್ಬಂದಿ ತಕ್ಷಣ ರೈಲು ನಿಲ್ಲಿಸುವಂತೆ ಲೋಕೋ ಪೈಲಟ್‌ಗೆ ಮಾಹಿತಿ ನೀಡಿದ್ದಾರೆ.
ಎಚ್ಚೆತ್ತ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದು. ಈ ವೇಳೆ ರೈಲ್ವೇ ಸಿಬ್ಬಂದಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡು ರೈಲಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡ 30 ನಿಮಿಷಗಳ ಬಳಿಕ ರೈಲು ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದೆ.


















