ಬೆಂಗಳೂರು: ದೇಶದಲ್ಲಿ ಬಹುತೇಕ ಜನ ಈಗ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದರಿಂದ ಚಿಲ್ಲರೆ ಸಮಸ್ಯೆಯು ಮೊದಲಿನಷ್ಟು ಬಾಧಿಸುತ್ತಿಲ್ಲ. ತರಕಾರಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಯುಪಿಐ ಮೂಲಕವೇ ಪೇಮೆಂಟ್ ಮಾಡಬಹುದಾಗಿದೆ. ಇಷ್ಟಾದರೂ ಗ್ರಾಮೀಣ ಪ್ರದೇಶಗಳಲ್ಲಿ, ನಗರ ಪ್ರದೇಶಗಳ ಬೀದಿ ಬದಿ ವ್ಯಾಪಾರಿಗಳ ಬಳಿ ಯಾವುದೇ ವಹಿವಾಟು ನಡೆಸಿದಾಗ ಚಿಲ್ಲರೆ ಸಮಸ್ಯೆ ಬಾಧಿಸುತ್ತದೆ. ಇದನ್ನು ನಿವಾರಿಸಲು ಈಗ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಹೌದು, ಸಣ್ಣ ಮೊತ್ತದ ನೋಟುಗಳನ್ನು ಕೂಡ ಎಟಿಎಂಗಳ ಮೂಲಕ ವಿತ್ ಡ್ರಾ ಮಾಡುವ ಸೌಲಭ್ಯಕ್ಕೆ ಶೀಘ್ರವೇ ಚಾಲನೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಅಂದರೆ, ಎಟಿಎಂಗಳಲ್ಲಿ ಕೂಡ 10, 20 ಹಾಗೂ 50 ರೂಪಾಯಿ ಮುಖಬೆಲೆಯ ನೋಟುಗಳನ್ನು ವಿತ್ ಡ್ರಾ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಸಣ್ಣ ಮೊತ್ತದ ನೋಟುಗಳನ್ನು ವಿತರಿಸಲೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಹೈಬ್ರಿಡ್ ಎಟಿಎಂ’ಗಳನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಯಂತ್ರಗಳು ಕೇವಲ ಹಣ ವಿತರಿಸುವುದು ಮಾತ್ರವಲ್ಲದೆ, ದೊಡ್ಡ ಮೊತ್ತದ ನೋಟುಗಳನ್ನು ಸಣ್ಣ ಚಿಲ್ಲರೆ ನೋಟುಗಳಾಗಿ ಬದಲಾಯಿಸಿಕೊಡುವ ಸೌಲಭ್ಯವನ್ನೂ ಹೊಂದಿರುತ್ತವೆ ಎಂದು ಹೇಳಲಾಗುತ್ತಿದೆ. ಇದರಿಂದ ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ನೌಕರರು ಮತ್ತು ಸಣ್ಣ ಪುಟ್ಟ ಖರೀದಿ ಮಾಡುವ ಸಾಮಾನ್ಯ ಜನರಿಗೆ ಚಿಲ್ಲರೆ ಪಡೆಯಲು ಎದುರಾಗುತ್ತಿದ್ದ ತೊಂದರೆ ತಪ್ಪಲಿದೆ.
ಮಹತ್ವದ ಯೋಜನೆಯ ಪ್ರಾಯೋಗಿಕ ಪರೀಕ್ಷೆಯು ಈಗಾಗಲೇ ಮುಂಬೈನಲ್ಲಿ ಆರಂಭವಾಗಿದೆ. ಜನಸಂದಣಿ ಹೆಚ್ಚಿರುವ ರೈಲ್ವೆ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಆಸ್ಪತ್ರೆಗಳಂತಹ ಸ್ಥಳಗಳಲ್ಲಿ ಇಂತಹ ಎಟಿಎಂಗಳನ್ನು ಅಳವಡಿಸಲಾಗುತ್ತಿದೆ. ಆರ್ ಬಿಐ ಈಗಾಗಲೇ ಬ್ಯಾಂಕ್ ಗಳಿಗೆ ಕನಿಷ್ಠ ಒಂದು ಕ್ಯಾಸೆಟ್ ನಲ್ಲಿ 100 ಅಥವಾ 200 ರೂಪಾಯಿ ನೋಟುಗಳನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಿದೆ.
ಇದನ್ನೂ ಓದಿ: ಚಾರ್ಟರ್ಡ್ ಸಹಕಾರಿ ಬ್ಯಾಂಕ್‌ನಲ್ಲಿ 9 ಹುದ್ದೆಗಳ ನೇಮಕ | ಬೆಂಗಳೂರಲ್ಲೇ ಉದ್ಯೋಗ



















