ವಾಷಿಂಗ್ಟನ್: ಅಮೆರಿಕದ ಸರ್ಕಾರಿ ಜಾಲತಾಣಗಳು ಮತ್ತು ಮೂಲಸೌಕರ್ಯಗಳನ್ನು ಸೈಬರ್ ದಾಳಿಗಳಿಂದ ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಉನ್ನತ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಲಭ್ಯವಿರುವ ಚಾಟ್ ಜಿಪಿಟಿಗೆ (ChatGPT)ಗೆ ಸೂಕ್ಷ್ಮ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಭಾರತೀಯ ಮೂಲದ ಮಧು ಗೊಟ್ಟುಮುಕ್ಕಲ ಈ ಎಡವಟ್ಟು ಮಾಡಿದ ಅಧಿಕಾರಿ.
ಅಮೆರಿಕದ ಸೈಬರ್ ಸೆಕ್ಯೂರಿಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಸೆಕ್ಯೂರಿಟಿ ಏಜೆನ್ಸಿಯ (CISA) ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಮಧು ಗೊಟ್ಟುಮುಕ್ಕಲ ಅವರು, ಕಳೆದ ಬೇಸಿಗೆಯಲ್ಲಿ ಕೆಲವು ಅಧಿಕೃತ ದಾಖಲೆಗಳನ್ನು ಚಾಟ್ ಜಿಪಿಟಿಗೆ ಅಪ್ಲೋಡ್ ಮಾಡಿದ್ದರು. ಅವರು ಅಪ್ಲೋಡ್ ಮಾಡಿದ ದಾಖಲೆಗಳು ಅತ್ಯಂತ ಗೌಪ್ಯ (Classified) ವರ್ಗಕ್ಕೆ ಸೇರದಿದ್ದರೂ ಸಹ, ಅವುಗಳನ್ನು “ಅಧಿಕೃತ ಬಳಕೆಗೆ ಮಾತ್ರ” ಎಂದು ಗುರುತಿಸಲಾಗಿತ್ತು. ಸೈಬರ್ ಭದ್ರತೆಯ ದೃಷ್ಟಿಯಿಂದ ಇಂತಹ ದಾಖಲೆಗಳನ್ನು ಸಾರ್ವಜನಿಕ ಎಐ (AI) ವೇದಿಕೆಗಳೊಂದಿಗೆ ಹಂಚಿಕೊಳ್ಳುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಆಂತರಿಕ ತನಿಖೆ
ಮಧು ಅವರು ದಾಖಲೆಗಳನ್ನು ಅಪ್ಲೋಡ್ ಮಾಡಿದ ತಕ್ಷಣ ಸರ್ಕಾರದ ಭದ್ರತಾ ವ್ಯವಸ್ಥೆಯು ಸ್ವಯಂಚಾಲಿತವಾಗಿ ಎಚ್ಚರಿಕೆಯ ಸಂದೇಶವನ್ನು (Security Alert) ರವಾನಿಸಿದೆ. ಇದು ಸರ್ಕಾರದ ಆಂತರಿಕ ಮಾಹಿತಿ ಸೋರಿಕೆಯಾಗದಂತೆ ತಡೆಯಲು ರೂಪಿಸಲಾದ ಸುರಕ್ಷತಾ ವ್ಯವಸ್ಥೆಯ ಭಾಗವಾಗಿತ್ತು. ಈ ಹಿನ್ನೆಲೆಯಲ್ಲಿ ಹೋಮ್ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯು ಕಳೆದ ಆಗಸ್ಟ್ನಲ್ಲಿ ಆಂತರಿಕ ತನಿಖೆಯನ್ನು ಆರಂಭಿಸಿದೆ. ಆದರೂ, ಈ ತನಿಖೆಯ ಅಂತಿಮ ವರದಿ ಅಥವಾ ಇದರಿಂದ ಸರ್ಕಾರದ ವ್ಯವಸ್ಥೆಗೆ ಏನಾದರೂ ಧಕ್ಕೆ ಆಗಿದೆಯೇ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಚಾಟ್ ಜಿಪಿಟಿ ಬಳಕೆಗೆ ವಿಶೇಷ ಅನುಮತಿ
ಸಾಮಾನ್ಯವಾಗಿ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯ ಉದ್ಯೋಗಿಗಳಿಗೆ ಚಾಟ್ ಜಿಪಿಟಿ ಬಳಸಲು ಅನುಮತಿಯಿಲ್ಲ. ಆದರೆ ಮಧು ಗೊಟ್ಟುಮುಕ್ಕಲ ಅವರು ಕೆಲವು ನಿರ್ಬಂಧಗಳ ಅಡಿಯಲ್ಲಿ ಈ ಎಐ ವೇದಿಕೆಯನ್ನು ಬಳಸಲು ವಿಶೇಷ ಅನುಮತಿ ಪಡೆದಿದ್ದರು. ಚಾಟ್ ಜಿಪಿಟಿಯಲ್ಲಿ ದಾಖಲಿಸುವ ಮಾಹಿತಿಗಳನ್ನು ಆ ಸಾಫ್ಟ್ವೇರ್ ತನ್ನ ವ್ಯವಸ್ಥೆಯನ್ನು ಸುಧಾರಿಸಲು ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಸರ್ಕಾರದ ಸೂಕ್ಷ್ಮ ಮಾಹಿತಿಗಳನ್ನು ಅಲ್ಲಿ ಹಂಚಿಕೊಳ್ಳುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ವಿವಾದಗಳ ಸುಳಿಯಲ್ಲಿ ಮಧು
ಆಂಧ್ರ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿರುವ ಮಧು ಗೊಟ್ಟುಮುಕ್ಕಲ ಅವರು ರಷ್ಯಾ ಮತ್ತು ಚೀನಾದಂತಹ ದೇಶಗಳಿಂದ ಎದುರಾಗುವ ಸೈಬರ್ ಬೆದರಿಕೆಗಳಿಂದ ಅಮೆರಿಕದ ಫೆಡರಲ್ ನೆಟ್ವರ್ಕ್ಗಳನ್ನು ರಕ್ಷಿಸುವ ಪ್ರಮುಖ ಜವಾಬ್ದಾರಿ ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ‘ಪೋಲಿಗ್ರಾಫ್’ (ಸುಳ್ಳು ಪತ್ತೆ ಪರೀಕ್ಷೆ) ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಮಧು ಅವರು ಇದನ್ನು ನಿರಾಕರಿಸಿದ್ದಾರೆ. ಈಗ ಚಾಟ್ ಜಿಪಿಟಿ ವಿವಾದವು ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ: ಮಾರುಕಟ್ಟೆ ಏರಿಳಿತದ ಹೊತ್ತಿನಲ್ಲೇ ಹೊಸ ಮ್ಯೂಚುವಲ್ ಫಂಡ್ ಆರಂಭಿಸಿದ SBI | ಏನಿದರ ವಿಶೇಷ?



















