ನವದೆಹಲಿ : ಮುಂಬರುವ ಟಿ20 ವಿಶ್ವಕಪ್ಗೆ ಕೆಲವೇ ದಿನಗಳು ಬಾಕಿ ಇರುವಾಗ ಅಮೆರಿಕ (USA) ಕ್ರಿಕೆಟ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ಆ್ಯರನ್ ಜೋನ್ಸ್ ಅವರನ್ನು ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಹಲವು ಭ್ರಷ್ಟಾಚಾರದ ಆರೋಪಗಳ ಮೇಲೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಮಾನತುಗೊಳಿಸಿದೆ. ಈ ಬೆಳವಣಿಗೆಯು ವಿಶ್ವಕಪ್ ತಯಾರಿ ನಡೆಸುತ್ತಿರುವ ಅಮೆರಿಕ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದೆ.

ಐಸಿಸಿ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಐದು ಪ್ರಮುಖ ಆರೋಪಗಳು ಜೋನ್ಸ್ ಮೇಲಿವೆ. ಪ್ರಮುಖವಾಗಿ 2023-24ರ ಸಾಲಿನ ‘ಬಿಮ್10’ (Bim10) ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದು ಮತ್ತು ತನಿಖಾಧಿಕಾರಿಗಳಿಗೆ ಸಹಕರಿಸದ ಆರೋಪಗಳು ಇವರ ಮೇಲಿವೆ. “ಇದು ಕೇವಲ ಒಬ್ಬ ಆಟಗಾರನಿಗೆ ಸೀಮಿತವಾಗಿಲ್ಲ, ಈ ಪ್ರಕರಣದ ತನಿಖೆ ಮುಂದುವರಿದಂತೆ ಇನ್ನೂ ಹಲವು ಆಟಗಾರರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ,” ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ಎಚ್ಚರಿಸಿದೆ. ಜೋನ್ಸ್ ಅವರಿಗೆ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಲು ಜನವರಿ 28 ರಿಂದ 14 ದಿನಗಳ ಕಾಲಾವಕಾಶ ನೀಡಲಾಗಿದೆ.
ಪಾಕಿಸ್ತಾನವನ್ನು ಸೋಲಿಸಿದ್ದ ತಂಡ
31 ವರ್ಷದ ಆ್ಯರನ್ ಜೋನ್ಸ್ ಅಮೆರಿಕ ಕ್ರಿಕೆಟ್ನ ಅತ್ಯಂತ ಪ್ರಭಾವಿ ಆಟಗಾರರಲ್ಲಿ ಒಬ್ಬರು. 2024ರ ಟಿ20 ವಿಶ್ವಕಪ್ನಲ್ಲಿ ಅಮೆರಿಕ ತಂಡವು ಪಾಕಿಸ್ತಾನದಂತಹ ಬಲಿಷ್ಠ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸುವಲ್ಲಿ ಇವರ ಪಾತ್ರ ದೊಡ್ಡದಾಗಿತ್ತು. ಕೆನಡಾ ವಿರುದ್ಧ ಕೇವಲ 40 ಎಸೆತಗಳಲ್ಲಿ 94 ರನ್ ಸಿಡಿಸಿ ಇವರು ಜಾಗತಿಕ ಕ್ರಿಕೆಟ್ನ ಗಮನ ಸೆಳೆದಿದ್ದರು. ಇತ್ತೀಚಿನವರೆಗೆ ಶ್ರೀಲಂಕಾದಲ್ಲಿ ನಡೆದ ವಿಶ್ವಕಪ್ ಪೂರ್ವಸಿದ್ಧತಾ ಶಿಬಿರದಲ್ಲೂ ಪಾಲ್ಗೊಂಡಿದ್ದ ಜೋನ್ಸ್, ಈಗ ಅಮಾನತುಗೊಂಡಿರುವುದರಿಂದ ವಿಶ್ವಕಪ್ ತಂಡದಿಂದ ಹೊರಬೀಳುವುದು ಖಚಿತ.
ಈ ಬೆಳವಣಿಗೆಯಿಂದಾಗಿ ಅಮೆರಿಕ ಕ್ರಿಕೆಟ್ ಮಂಡಳಿಯು ಈಗ ಹೊಸ ಬ್ಯಾಟಿಂಗ್ ಸಂಯೋಜನೆಯನ್ನು ಹುಡುಕಬೇಕಾದ ಅನಿವಾರ್ಯತೆಗೆ ಸಿಲುಕಿದೆ. 2019 ರಲ್ಲಿ ಪದಾರ್ಪಣೆ ಮಾಡಿದ್ದ ಜೋನ್ಸ್, ಇದುವರೆಗೆ 52 ಏಕದಿನ ಮತ್ತು 48 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ಮತ್ತು ಮೇಜರ್ ಲೀಗ್ ಕ್ರಿಕೆಟ್ನಲ್ಲೂ ಗುರುತಿಸಿಕೊಂಡಿದ್ದ ಇವರ ವೃತ್ತಿಜೀವನವು ಈಗ ಈ ಗಂಭೀರ ಆರೋಪಗಳಿಂದಾಗಿ ಅನಿಶ್ಚಿತತೆಯತ್ತ ಸಾಗಿದೆ.
ಇದನ್ನೂ ಓದಿ : ಕುಮಟಾದಲ್ಲಿ KSRTC ಬಸ್-ಬೊಲೆರೊ ನಡುವೆ ಭೀಕರ ಅಪಘಾತ | 8 ಮಂದಿಗೆ ಗಾಯ



















