ಚಿತ್ರದುರ್ಗದ ಹೆಚ್. ಆನಂದಪ್ಪ ಅವರು ‘ಅಮ್ಮಾ ಎಂಟರ್ ಪ್ರೈಸಸ್’ ಮೂಲಕ ಅದ್ದೂರಿಯಾಗಿ ‘ಮೆಜೆಸ್ಟಿಕ್ 2’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಮಗ ಭರತ್ ಕುಮಾರ್ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶೃತಿ ಅವರು ನಾಯಕನ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ಮೆಜೆಸ್ಟಿಕ್ 2’ ಸಿನಿಮಾಗೆ ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಇನ್ನೇನಿದ್ದರೂ ಬಿಡುಗಡೆ ಮಾತ್ರ ಬಾಕಿ. ನವೆಂಬರ್ ತಿಂಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ‘ಮೆಜೆಸ್ಟಿಕ್ 2’ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರು U/A ಪ್ರಮಾಣ ಪತ್ರ ನೀಡಿದ್ದಾರೆ.
ಈ ಸಿನಿಮಾದಲ್ಲಿ 5 ಹಾಡುಗಳು ಇವೆ. ವಿನು ಮನಸು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ವೀನಸ್ ಮೂರ್ತಿ ಕೆಲಸ ಮಾಡಿದ್ದಾರೆ ಸಹ ನಿರ್ದೇಶಕರಾಗಿ ವಿಜಯಕುಮಾರ್, ಸಾಹಸ ನಿರ್ದೇಶಕರಾಗಿ ಚಿನ್ನಯ್ಯ ಅವರು ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ರಾಮು ಅವರು ಕಥೆ ಮತ್ತು ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.
ಹೀರೋ ಭರತ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಸಂಹಿತಾ ವಿನ್ಯಾ ಅವರು ಅಭಿನಯಿಸಿದ್ದಾರೆ. ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ? ಅಲ್ಲಿನ ದಂಧೆಗಳು, ಅಕ್ರಮ ಚಟುವಟಿಕೆಗಳು ಹೇಗಿವೆ? ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬಿತ್ಯಾದಿ ವಿವರಗಳನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ನಿರ್ದೇಶಕ ರಾಮು ಅವರು ತೆರೆಗೆ ತರುತ್ತಿದ್ದಾರೆ. ಮೆಜೆಸ್ಟಿಕ್, ಹೆಚ್.ಎಂ.ಟಿ., ರಾಮೋಹಳ್ಳಿ, ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ. ನಗರದ ನಿಸರ್ಗ ಹೌಸ್, ಚಿತ್ರದುರ್ಗದ ಮರುಘಾ ಮಠ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಇಬ್ಬರು ಖತರ್ನಾಕ್ ಬೈಕ್ ಕಳ್ಳರು ಅರೆಸ್ಟ್ | 16.52 ಲಕ್ಷ ಮೌಲ್ಯದ 30 ಬೈಕ್‌ಗಳು ವಶಕ್ಕೆ!



















