ಲಕ್ನೋ: ಮಗ ಮೃತಪಟ್ಟ ನಂತರ ಆತನ ಪತ್ನಿಯಿಂದ ಅಂದರೆ ಸೊಸೆಯಿಂದ ಜೀವನಾಂಶ ಕೋರಿ ವೃದ್ಧ ಪೋಷಕರು ಅರ್ಜಿ ಸಲ್ಲಿಸಿದ್ದ ಘಟನೆ ನಡೆದಿದ್ದು, ಈ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. “ನೈತಿಕ ಹೊಣೆಗಾರಿಕೆಗಳು ಎಷ್ಟೇ ಬಲವಾಗಿದ್ದರೂ ಸಹ, ಶಾಸನಬದ್ಧ ಕಾನೂನು ಬೆಂಬಲವಿಲ್ಲದ ಹೊರತು ಅವುಗಳನ್ನು ಕಾನೂನುಬದ್ಧ ಹೊಣೆಗಾರಿಕೆಯಾಗಿ ಜಾರಿಗೊಳಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ವ್ಯಕ್ತಿಯ ಪೋಷಕರು ಈ ಅರ್ಜಿ ಸಲ್ಲಿಸಿದ್ದರು. ತಮ್ಮ ಮಗ 2021ರಲ್ಲಿ ಮೃತಪಟ್ಟಿದ್ದು, ಆತನ ಪತ್ನಿ (ಸೊಸೆ) ಕೂಡ ಅದೇ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೊಸೆಗೆ ಸ್ವತಂತ್ರ ಆದಾಯವಿರುವುದಲ್ಲದೆ, ಮಗನ ಸಾವಿನ ನಂತರ ಇಲಾಖೆಯಿಂದ ಬರುವ ಎಲ್ಲಾ ಸೇವಾ ಸೌಲಭ್ಯಗಳು ಅವರಿಗೇ ಸಂದಿವೆ. ನಾವು ಅನಕ್ಷರಸ್ಥರಾಗಿದ್ದು, ವಯಸ್ಸಾಗಿರುವುದರಿಂದ ನಮ್ಮನ್ನು ಪೋಷಿಸುವುದು ಸೊಸೆಯ ನೈತಿಕ ಮತ್ತು ಕಾನೂನುಬದ್ಧ ಕರ್ತವ್ಯ ಎಂದು ವೃದ್ಧ ದಂಪತಿ ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ಇವರ ಅರ್ಜಿಯನ್ನು ತಿರಸ್ಕರಿಸಿದ್ದರಿಂದ, ಇವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಾನೂನಿನ ವ್ಯಾಪ್ತಿಯಲ್ಲಿ ಪೋಷಕರಿಲ್ಲ
ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಅವರಿದ್ದ ಪೀಠವು, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (BNSS) ಸೆಕ್ಷನ್ 144ರ ಅಡಿಯಲ್ಲಿ ಈ ಮನವಿಯನ್ನು ಪರಿಶೀಲಿಸಿತು. ಈ ಕಾನೂನು ಒಬ್ಬ ವ್ಯಕ್ತಿಯು ತನ್ನ ಅವಲಂಬಿತ ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶ ನೀಡುವುದನ್ನು ಕಡ್ಡಾಯಗೊಳಿಸುತ್ತದೆ. ಆದರೆ, ಈ ಪಟ್ಟಿಯಲ್ಲಿ ‘ಮಾವ-ಅತ್ತೆ’ (Parents-in-law) ಎಂಬ ಉಲ್ಲೇಖವಿಲ್ಲ. ಶಾಸಕಾಂಗವು ಉದ್ದೇಶಪೂರ್ವಕವಾಗಿಯೇ ಸೊಸೆಯ ಮೇಲೆ ಇಂತಹ ಹೊಣೆಗಾರಿಕೆಯನ್ನು ಹೊರಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅನುಕಂಪದ ಆಧಾರದ ಕೆಲಸವಲ್ಲ
ಇನ್ನು ಸೊಸೆಗೆ ಸಿಕ್ಕಿರುವ ಕೆಲಸವು ಅನುಕಂಪದ ಆಧಾರದ ಮೇಲೆ ಸಿಕ್ಕಿದ್ದಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಗಮನಿಸಿದೆ. ಒಂದು ವೇಳೆ ಮಗನ ಸಾವಿನ ನಂತರ ಆತನ ಬದಲಿಗೆ ಸೊಸೆಗೆ ಅನುಕಂಪದ ಆಧಾರದಲ್ಲಿ ಕೆಲಸ ಸಿಕ್ಕಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಆದರೆ ಇಲ್ಲಿ ಸೊಸೆ ಸ್ವಂತ ಅರ್ಹತೆಯ ಮೇಲೆ ಕೆಲಸ ಮಾಡುತ್ತಿರುವುದರಿಂದ ಮತ್ತು ಕಾನೂನಿನಲ್ಲಿ ಮಾವ-ಅತ್ತೆಯನ್ನು ಸಾಕುವುದು ಸೊಸೆಯ ಜವಾಬ್ದಾರಿ ಎಂದು ಎಲ್ಲಿಯೂ ಉಲ್ಲೇಖಿಸದ ಕಾರಣ, ನೈತಿಕ ಕಾರಣಗಳಿಗಾಗಿ ಕಾನೂನನ್ನು ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸಿ ವೃದ್ಧ ದಂಪತಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಇದನ್ನೂ ಓದಿ : ಐಸ್‌ಕ್ರೀಮ್ ವ್ಯಾಪಾರಿಯ ಶಿರಚ್ಛೇದ ಮಾಡಿ ಮನೆಗೆ ತಂದ ಪಾಪಿ ಬಳಿಕ ಮಾಡಿದ್ದೇನು?



















