ಬೆಂಗಳೂರು : ಧರ್ಮಸ್ಥಳ ತಲೆಬುರುಡೆ ಕೇಸ್ ತನಿಖೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಧರ್ಮಸ್ಥಳ ಠಾಣೆಯ ಎಫ್ಐಆರ್ 39/2025 ತನಿಖೆಗೆ ಅ.30ರಂದು ನೀಡಿದ್ದ ತಡೆಯಾಜ್ಞೆಯನ್ನ ಹೈಕೋರ್ಟ್ ತೆರವುಗೊಳಿಸಿದ್ದು, ತನಿಖೆಗೆ ಅನುಮತಿ ನೀಡಿದೆ. ಈ ಮೂಲಕ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠ್ಠಲ ಗೌಡ ಎಸ್‌ಐಟಿ ತನಿಖೆಯನ್ನ ಮತ್ತೆ ಎದುರಿಸಬೇಕಿದೆ.
ಪ್ರಕರಣ ಸಂಬಂಧ ಎಸ್‌ಐಟಿ ಪರ ವಾದಿಸಿದ್ದ ವಿಶೇಷ ಅಭಿಯೋಜಕ ಬಿ.ಎನ್.ಜಗದೀಶ್, ಮ್ಯಾಜಿಸ್ಟ್ರೇಟ್ ಅನುಮತಿ ಪಡೆದ ನಂತರವೇ ತನಿಖೆ ನಡೆಸಲಾಗುತ್ತಿದೆ. ಎಸ್‌ಐಟಿ ತನಿಖೆಯನ್ನು ಅರ್ಜಿದಾರರೇ ಹೊಗಳಿದ್ದಾರೆಂದು ನ್ಯಾಯಾಲಕ್ಕೆ ತಿಳಿಸಿದ್ದರು. ಈ ಹಿನ್ನಲೆ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ, ಆರೋಪಿಗಳಿಗೆ ಕಿರುಕುಳ ನೀಡದಂತೆ ಮಧ್ಯಂತರ ಆದೇಶ ವಿಸ್ತರಣೆ ಮಾಡಿ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ಮಾಡಲಾಗಿದೆ.
ಹಿನ್ನೆಲೆ |
ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ನಾಲ್ವರ ಮೇಲೆ ಎಫ್‌ಐಆರ್ 39/2025 ದಾಖಲಾಗಿತ್ತು. ಈ ಎಫ್‌ಐಆರ್ ಆಧಾರದಲ್ಲಿ ತನಿಖೆಗೆ ನೋಟಿಸ್ ನೀಡಲಾಗಿತ್ತು. ಆದರೆ ತನಿಖೆಗೆ ಹಾಜರಾಗದೆ ಮಹೇಶ್ ಶೆಟ್ಟಿ ತಲೆ ಮರೆಸಿಕೊಂಡಿದ್ದರು. ಬಾರಿ ಬಾರಿ ನೋಟಿಸ್ ಕೊಡಲಾಗಿತ್ತು. ಹೀಗಾಗಿ ಬಂಧನದ ಭೀತಿ ಎದುರಾಗಿದ್ದರಿಂದ ತಿಮರೋಡಿ ಟೀಮ್ ಹೈಕೋರ್ಟ್ ಕದ ತಟ್ಟಿದ್ದರು. ಪ್ರಕರಣದಲ್ಲಿ ಅನಗತ್ಯವಾಗಿ ತನಿಖೆ ನಡೆಸಲಾಗುತ್ತಿದೆ. ಹಲವಾರು ಬಾರಿ ತನಿಖೆಗೆ ಕರೆಯಲಾಗಿದೆ. ವಿಚಾರಣೆ ಹಾದಿ ತಪ್ಪುತ್ತಿದೆ ಎಂದು ತಿಮರೋಡಿ ತಂಡ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.
ಇದೀಗ ತನಿಖೆಗೆ ತಡೆಯಾಜ್ಞೆ ತೆರವುಗೊಂಡಿದ್ದರಿಂದ ಮತ್ತೆ ತಿಮರೋಡಿ ತಂಡಕ್ಕೆ ಎಸ್‌ಐಟಿ ತನಿಖೆಯ ಬಿಸಿ ಮುಟ್ಟಲಿದೆ. ಈಗಾಗಲೇ ಎಸ್‌ಐಟಿ ತನಿಖಾ ವರದಿ ಸಲ್ಲಿಕೆ ಅಕ್ಟೋಬರ್ 31 ಕ್ಕೆ ಸಲ್ಲಿಕೆಯಾಗಬೇಕಿತ್ತು, ಆದರೆ ಕೆಲವೊಂದು ಕಾರಣದಿಂದ ವಿಳಂಬವಾಗಿದೆ ಎಂದು ಗೃಹಸಚಿವ ಪರಮೇಶ್ವರ್ ಹೇಳೊದ್ದರು. ಹೀಗಾಗಿ ಸದ್ಯದಲ್ಲೇ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಬರುವ ಸಾಧ್ಯತೆ ಇದೆ.
ಇದನ್ನೂ ಓದಿ : ರಾಯಚೂರಲ್ಲಿ ವಿಚಾರಣೆಗೆ ಬಂದ ಪೊಲೀಸರನ್ನೇ ಕಂಬಕ್ಕೆ ಕಟ್ಟಿ ಥಳಿಸಿದ ದಂಪತಿ!


















