ಬೆಂಗಳೂರು : ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಸದ್ಯ ಈ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದ್ದು, ಇದೀಗ ಪೊಲೀಸ್ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ. ಕೊಲೆ ಆರೋಪಿಯಾದ ಡಾ. ಮಹೇಂದ್ರ ರೆಡ್ಡಿ, ಪತ್ನಿಯ ಹತ್ಯೆ ಪಶ್ಚಾತ್ತಾಪದಿಂದ ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಎಂಬ ವಿಷಯ ಬಯಲಾಗಿದೆ.
ಹೌದು.. ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪಿ ಪತಿ ಡಾ.ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ತನಿಖೆ ವೇಳೆ ಹಲವಾರು ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಮಹೇಂದ್ರ ತನ್ನ ಪತ್ನಿಯ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಆಕೆಯನ್ನು ಕೊಂದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ. ಮರಣೋತ್ತರ ಪರೀಕ್ಷೆ ನಡೆಸಿದಾಗ ಆರೋಪಿ ಕೃತಿಕಾಗೆ ಮಿತಿ ಮೀರಿ ಅನಸ್ತೇಶಿಯಾ ನೀಡಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಪೊಲೀಸರ ಮುಂದೆ ಆರೋಪಿ ಮತ್ತೊಂದು ಸತ್ಯ ಬಿಚ್ಚಿಟ್ಟಿದ್ದಾನೆ.
ಹತ್ಯೆಯ ಪ್ರಾಯಶ್ಚಿತ್ತಕ್ಕಾಗಿ 6 ತಿಂಗಳು ಟೆಂಪಲ್ ರನ್ ಮಾಡಿದ್ದ ಮಹೇಂದ್ರ :
ಕೊಲೆ ಮಾಡಿ ಪಾಪಪ್ರಜ್ಞೆಯಿಂದ ಬಳಲುತ್ತಿದ್ದ ಆರೋಪಿ ದೇವಸ್ಥಾನಗಳ ಮೊರೆಹೋಗಿದ್ದ ಎನ್ನುವುದು ತನಿಖೆಯ ವೇಳೆ ತಿಳಿದುಬಂದಿದೆ. ಪತ್ನಿ ಸಾವಿನಿಂದ ತೀವ್ರ ಆತಂಕಕ್ಕೊಳಗಾಗಿದ್ದ ಮಹೇಂದ್ರ ರೆಡ್ಡಿ, ಆರು ತಿಂಗಳ ಕಾಲರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದ. ತಾನು ಮಾಡಿದ ಹೇಯ ಕೃತ್ಯದಿಂದ ಎಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೀನೋ ಎಂಬ ಭಯದಿಂದ ಹಾಗೂ ಮಾನಸಿಕ ನೆಮ್ಮದಿಗೋಸ್ಕರ ಸುಮಾರು 15ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಎನ್ನಲಾಗಿದೆ.
\



















