ಮುಂಬಯಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಗೆ ಭರ್ಜರಿ ಜಯ ಸಿಕ್ಕಿದೆ. ಅದರಲ್ಲೂ ಬಿಜೆಪಿಯಂತೂ ನಿರೀಕ್ಷೆಗೂ ಮೀರಿ ಸಾದನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಹಾಯುತಿ ಅಧಿಕಾರ ರಚನೆಗೆ ಮುಂದಾಗಿದೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಹಾಗೂ ಮೈತ್ರಿ ಕೂಟದ ಮುಖಂಡರು ಇಂದು ಸುದ್ದಿಗೋಷ್ಠಿ ನಡೆಸಿ ಸಿಹಿ ಹಂಚಿದರು. ಈ ವೇಳೆ ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ನಮ್ಮದು ಶ್ರೀಸಾಮಾನ್ಯನ ಸರ್ಕಾರ. ನಮಗೆ ಪ್ರಧಾನಿ ಮೋದಿ ಅವರೇ ಆಧಾರ ಸ್ತಂಭ. ಮಹಿಳೆಯರು, ಮಕ್ಕಳು ಮತ್ತು ರೈತರು ನಮಗೆ ಕೇಂದ್ರ ಬಿಂದುವಾಗಿದ್ದರು. ನಾವು ಕಾಮನ್ ಮ್ಯಾನ್ ಅನ್ನು ಸೂಪರ್ಮ್ಯಾನ್ಗಳಾಗಿ ಪರಿವರ್ತಿಸಲು ಬಯಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಾತನಾಡಿ, ಸಿಎಂ ಹುದ್ದೆಗಾಗಿ ನಮ್ಮ ಮೈತ್ರಿಯಲ್ಲಿ ಗದ್ದಲವಾಗಿದೆ ಎಂದು ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದೆಲ್ಲ ಸುಳ್ಳು. ಮೈತ್ರಿಯ ನಾಯಕರು ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.