ನವದೆಹಲಿ : ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 156ನೇ ಜನ್ಮದಿನೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ರಾಜ್‌ಘಾಟ್‌ನಲ್ಲಿರುವ ಗಾಂಧೀಜಿಯವರ ಸಮಾಧಿಗೆ ಗುರುವಾರ ಬೆಳಿಗ್ಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ಮುರ್ಮು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ನಲ್ಲಿ, ದೇಶದ ಪ್ರಜೆಗಳು ಸ್ವಚ್ಛ, ದಕ್ಷ, ಸಂಪೂರ್ಣ ಸಬಲೀಕರಣ ಮತ್ತು ಸಮೃದ್ಧ ಭಾರತ ನಿರ್ಮಿಸುವ ಮೂಲಕ ಗಾಂಧೀಜಿಯ ಕನಸನ್ನು ನನಸಾಗಿಸಲು ಸಂಕಲ್ಪ ಮಾಡಬೇಕು. ರಾಷ್ಟ್ರಪಿತನ ಆದರ್ಶಗಳು ಮತ್ತು ಮೌಲ್ಯಗಳಿಗೆ ಎಲ್ಲರೂ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಎಂದು ತಮ್ಮ ಸಂದೇಶದಲ್ಲಿ ಕರೆ ಕೊಟ್ಟಿದ್ದಾರೆ. ಗಾಂಧೀಜಿ ಶಾಂತಿ, ಸಹಿಷ್ಣುತೆ ಮತ್ತು ಸತ್ಯದ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಇದು ಇಡೀ ಮನುಕುಲಕ್ಕೆ ಸ್ಫೂರ್ತಿಯಾಗಿದೆ. ಅಸ್ಪೃಶ್ಯತೆ, ಅನಕ್ಷರತೆ, ವ್ಯಸನ ಮತ್ತಿತರ ಸಾಮಾಜಿಕ ದುಷ್ಕೃತ್ಯಗಳನ್ನು ನಿರ್ಮೂಲನೆ ಮಾಡಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅಚಲ ದೃಢನಿಶ್ಚಯದಿಂದ ಸಮಾಜದ ದುರ್ಬಲ ವರ್ಗಗಳಿಗೆ ಶಕ್ತಿ ಮತ್ತು ಬಲ ನೀಡಿದರು ಎಂದು ಅವರು ಸ್ಮರಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಧೈರ್ಯ ಮತ್ತು ಸರಳತೆ ಹೇಗೆ ದೊಡ್ಡ ಬದಲಾವಣೆಯ ಸಾಧನಗಳಾಗಬಹುದು ಎಂಬುದನ್ನು ಗಾಂಧೀಜಿ ಪ್ರದರ್ಶಿಸಿದ್ದರು. ಜನರನ್ನು ಸಬಲೀಕರಣಗೊಳಿಸುವ ಅಗತ್ಯ ಸಾಧನವಾಗಿ ಸೇವೆ ಮತ್ತು ಕರುಣೆಯ ಶಕ್ತಿಯನ್ನು ಅವರು ನಂಬಿದ್ದರು ಎಂದು ಸ್ಮರಿಸಿದ್ದಾರೆ. ಇದೇ ವೇಳೆ, ವಿಕ್ಷಿತ ಭಾರತ್ ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಗಾಂಧೀಜಿಯ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.