ಮುಂಬೈ: ಪ್ರೇಮ ಪ್ರಕರಣವು ಮರ್ಯಾದೆಗೇಡು ಹತ್ಯೆಯಾಗಿ ಕೊನೆಯಾಗುವ ಹಲವಾರು ಪ್ರಕರಣಗಳು ವರದಿಯಾಗುತ್ತಲೇ ಇವೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಮಹಾರಾಷ್ಟ್ರದ ದಾವಲವಾಡಿ ಗ್ರಾಮದಲ್ಲಿ 17 ವರ್ಷದ ಬಾಲಕಿಯನ್ನು ಆಕೆಯ ತಂದೆಯೇ ಕತ್ತು ಹಿಸುಕಿ ಹತ್ಯೆ ಮಾಡಿ, ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಪೊಲೀಸ್ ವಿಚಾರಣೆಯ ಬಳಿಕ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸೆಪ್ಟೆಂಬರ್ 5ರ ರಾತ್ರಿ ಈ ಘಟನೆ ನಡೆದಿದೆ. 17 ವರ್ಷದ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಮಗಳು, ತಮ್ಮದೇ ಸಮುದಾಯದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇದರಿಂದ ಆರೋಪಿ ತಂದೆ ಹರಿ ಜೋಗ್ದಾಂಡ್ ತೀವ್ರ ಅಸಮಾಧಾನಗೊಂಡಿದ್ದ.
ಈ ಹಿನ್ನೆಲೆಯಲ್ಲಿ, ಆತ ತನ್ನ ಮಗಳು ಮಲಗಿದ್ದಾಗ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ನಂತರ, ಆಕೆಯ ಶವವನ್ನು ಮನೆಯ ಮೇಲ್ಛಾವಣಿಯ ಕಬ್ಬಿಣದ ಆ್ಯಂಗಲ್‌ಗೆ ಹಗ್ಗದಿಂದ ನೇಣು ಬಿಗಿದು, ಇದು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಬದ್ನಾಪುರ್ ಪೊಲೀಸ್ ಇನ್ಸ್‌ಪೆಕ್ಟರ್ ಗಣೇಶ್ ಸುರ್ವಸೆ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಅಸಂಗತತೆಗಳು ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿದೆ. ಅನಾಮಧೇಯ ದೂರವಾಣಿ ಕರೆಯ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ತೀವ್ರ ವಿಚಾರಣೆಯ ನಂತರ, ಆರೋಪಿಯು ಸೆಪ್ಟೆಂಬರ್ 6ರಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.



















