ಮಹಾರಾಜ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಗೆ ಸೋಲಿನ ರುಚಿ ತೋರಿಸಿ, ಮೈಸೂರು ವಾರಿಯರ್ಸ್ ಫೈನಲ್ ಪ್ರವೇಶಿಸಿದೆ.
ಹುಬ್ಬಳ್ಳಿ ತಂಡವನ್ನು 9 ರನ್ ಗಳಿಂದ ಮಣಿಸಿದ ಮೈಸೂರು ತಂಡ ಟೂರ್ನಿಯಲ್ಲಿ ಎರಡನೇ ತಂಡವಾಗಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ನಾಳೆ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಮೈಸೂರು ಹಾಗೂ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡ 168 ರನ್ ಗಳಿಸಿ, 9 ರನ್ ಗಳಿಂದ ಸೋಲು ಕಂಡಿತು.
ಟಾಸ್ ಗೆದ್ದ ಹುಬ್ಬಳ್ಳಿ ತಂಡದ ನಾಯಕ ಮನೀಶ್ ಪಾಂಡೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್ ಆರಂಭಿಸಿದ್ದ ಸಿ. ಕಾರ್ತಿಕ್ 6 ರನ್ ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ನಾಯಕ ಕರುಣ್ ನಾಯರ್ ಕೂಡ ಕೇವಲ 4 ರನ್ಗಳಿಗೆ ಪೆವಿಲಿಯನ್ ಸೇರಿದರು.
ಕರುಣ್ ನಂತರ ಬಂದ ಶರತ್, ಆರಂಭಿಕ ಕಾರ್ತಿಕ್ ಅವರೊಂದಿಗೆ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ 3ನೇ ವಿಕೆಟ್ ಪತನದ ವೇಳೆಗೆ 75 ರನ್ ಗಳಿಸಿತು. ಶರತ್ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಕಾರ್ತಿಕ್ 43 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 53 ರನ್ ಸಿಡಿಸಿದರು. ಸಮಿತ್ 18 ರನ್ ಗಳಿಸಿದರು. ಮನೋಜ್ ಭಾಂಡಗೆ 26 ರನ್, ಹರ್ಶಿಲ್ 14, ಕೆ. ಗೌತಮ್ 10 ರನ್, ವಿದ್ಯಾಧರ್ 11 ರನ್ ಗಳಿಸಿದರು. ಪರಿಣಾಮ ತಂಡದ ಮೊತ್ತ 177 ರನ್ ಗೆ ಏರಿತು.
ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ 9 ರನ್ ಗಳಿಂದ ಸೋಲು ಕಂಡಿತು. ಹುಬ್ಬಳ್ಳಿ ತಂಡಕ್ಕೆ ಮೊದಲ ವಿಕೆಟ್ ಗೆ 29 ರನ್ ಗಳ ಜೊತೆಯಾಟ ಸಿಕ್ಕಿತು. ತಿಪ್ಪ ರೆಡ್ಡಿ 33 ರನ್ ಗಳಿಸಿದರು. ಶ್ರೀಜಿತ್ 20, ಅನೀಶ್ವರ್ ಗೌತಮ್ 6 ರನ್ ಗಳಿಸಿದರು. ಕೊನೆಗೆ ಕಾರ್ತಿಕೇಯ ಹಾಗೂ ಮನ್ವಂತ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯವನ್ನು ರೋಚಕಗೊಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಕಾರ್ತಿಕೇಯ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 61 ರನ್ ಗಳಿಸಿದರೆ, ಮನ್ವಂತ್ 20 ಎಸೆತಗಳಲ್ಲಿ 21 ರನ್ ಗಳಿಸಿದರು.