ಪ್ರಯಾಗ್‌ರಾಜ್: ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ (Mahakumbh 2025) 11ನೇ ದಿನಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ಅಲ್ಲದೇ, ಇಲ್ಲಿಯವರೆಗೆ ಬರೋಬ್ಬರಿ 10 ಕೋಟಿ ಭಕ್ತರು, ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ (Holy Pilgrims) ಮಾಡಿದ್ದಾರೆ.
ಈ ಕುರಿತು ಉತ್ತರಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಜ. 13ರಂದು ಪ್ರಾರಂಭವಾದ ಮಹಾ ಕುಂಭ ಮೇಳದಲ್ಲಿ ಇಲ್ಲಿಯವರೆಗೆ ಅಷ್ಟೊಂದು ಜನ ಸ್ನಾನ ಮಾಡಿದ್ದಾರೆ. ಜ. 13ರಂದು ಶಾಹಿ ಸ್ನಾನದ ಮೂಲಕ ಉದ್ಘಾಟನೆಯಾದ ಕುಂಭಮೇಳದಲ್ಲಿ ವಿವಿಧ ಬಗೆಯ ಪುಣ್ಯಸ್ನಾನದಲ್ಲಿ 10 ಕೋಟಿ ಜನ ಸ್ನಾನ ಮಾಡಿದ್ದಾರೆ. ಜ.15ರಂದು ಮಕರ ಸಂಕ್ರಾಂತಿ ಸ್ನಾನ ನಡೆಯಿತು.
ಮುಂದೆ ಜನವರಿ 29 ರಂದು ಮೌನಿ ಅಮಾವಾಸ್ಯೆ ಸ್ನಾನ, ಫೆಬ್ರವರಿ 3ರಂದು ವಸಂತ ಪಂಚಮಿ ಸ್ನಾನ, ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಸ್ನಾನ, ಫೆಬ್ರವರಿ 26ರಂದು ಮಹಾ ಶಿವರಾತ್ರಿ ಸ್ನಾನ ನೆರವೇರಲಿದೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 45 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ.