ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಹಿಂದೂಗಳ ಧಾರ್ಮಿಕ ಉತ್ಸವ ಮಹಾ ಕುಂಭ ಮೇಳದಲ್ಲಿ ಭಾನುವಾರ ಸಂಜೆ ಭೀಕರ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಪವಿತ್ರ ನಗರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಬೆಂಕಿ ಕಾಣಿಸಿಕೊಂಡ ಮಹಾ ಕುಂಭದ ಟೆಂಟ್ ನಗರದವಾಗಿರುವ ಸೆಕ್ಟರ್ 19ಕ್ಕೆ ಹಲವಾರು ಅಗ್ನಿಶಾಮಕ ವಾಹನಗಳು ಜಮಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿವೆ.
ಸ್ಥಳೀಯ ಅಧಿಕಾರಿಗಳು, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಸಮನ್ವಯದೊಂದಿಗೆ ತಕ್ಷಣ ಬೆಂಕಿ ಶಮನದ ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ. ಬೆಂಕಿ ಇನ್ನಷ್ಟು ಪ್ರದೇಶಗಳಿಗೆ ಹರಡುವ ಮೊದಲೇ ನಂದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರಂಭಿಕ ವರದಿಗಳ ಪ್ರಕಾರ, ಶಿಬಿರದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ಹರಡಿ ಆ ಪ್ರದೇಶದಲ್ಲಿ ಸ್ಥಾಪಿಸಲಾದ ಹಲವಾರು ಡೇರೆಗಳಿಗೆ ಆವರಿಸಿದೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಅಧಿಕಾರಿಗಳಿಗೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡವೂ ಸ್ಥಳಕ್ಕೆ ಆಗಮಿಸಿದೆ.
ಸಮೀಪದ ರೈಲು ಸೇತುವೆಯ ಮೇಲೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದ ವೀಡಿಯೊದಲ್ಲಿ ಕ್ಯಾಂಪ್ ಸೈಟ್ ನಲ್ಲಿ ಭಾರಿ ಬೆಂಕಿ ಜ್ವಾಲೆಗಳು ಆವರಿಸಿರುವುದು ಕಾಣಬಹುದು. ಘಟನೆಯಲ್ಲಿ ಹಲವಾರು ಡೇರೆಗಳು ಸುಟ್ಟು ಬೂದಿಯಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.