ಪ್ರಯಾಗ್ರಾಜ್: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh 2025 )ಸಮಾಪ್ತಿಯಾಗಲು ಇನ್ನು 16 ದಿನಗಳಷ್ಟೇ ಬಾಕಿಯಿದ್ದು, ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಪರಿಣಾಮವೆಂಬಂತೆ, ಪ್ರಯಾಗ್ರಾಜ್ಗೆ ತೆರಳುವ ಮಾರ್ಗಗಳಲ್ಲಿ ಭಾರೀ ವಾಹನ ದಟ್ಟಣೆಯಾಗಿದ್ದು, ಸಾವಿರಾರು ಭಕ್ತರು ಹೆದ್ದಾರಿಗಳಲ್ಲೇ ಬಾಕಿಯಾಗುವಂತಾಗಿದೆ. ಸರಿಸುಮಾರು 300 ಕಿಲೋ ಮೀಟರ್ ವರೆಗೂ ವಾಹನಗಳು ಕ್ಯೂನಲ್ಲಿ ನಿಂತಿದ್ದು, ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಹೇಳಿದ್ದಾರೆ.


ಟ್ರಾಫಿಕ್ ನಿರ್ವಹಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ನೆರೆಯ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಪೊಲೀಸರು ಪ್ರಯಾಗ್ರಾಜ್ಗೆ ತೆರಳುವ ಮಾರ್ಗಗಳಲ್ಲಿ ವಾಹನಗಳ ಸಂಚಾರವನ್ನೇ ಸ್ಥಗಿತಗೊಳಿಸಿದ್ದಾರೆ. 200-300 ಕಿಲೋಮೀಟರ್ ಟ್ರಾಫಿಕ್ ಜಾಮ್ ಇರುವ ಕಾರಣ ಕುಂಭಮೇಳಕ್ಕೆ ಹೋಗುವುದು ಅಸಾಧ್ಯ. ವಾಹನಗಳು 48 ಗಂಟೆಗಳಿಂದಲೂ ಹೆದ್ದಾರಿಯಲ್ಲಿ ಸಿಲುಕಿಕೊಂಡಿವೆ. ಕೇವಲ 50 ಕಿ.ಮೀ. ಹಾದಿಯನ್ನು ಕ್ರಮಿಸಲು 10-12 ಗಂಟೆಗಲು ತಗಲುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ವಾರಾಣಾಸಿ, ಲಖನೌ ಮತ್ತು ಕಾನ್ಪುರದಿಂದ ಪ್ರಯಾಗ್ ರಾಜ್ಗೆ ಹೋಗುವ ಮಾರ್ಗಗಳಲ್ಲೂ 25 ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಮಹಾಕುಂಭ ನಗರದೊಳಗೂ 7 ಕಿ.ಮೀ. ಸಂಚಾರ ದಟ್ಟಣೆಯಿದೆ ಎಂದು ಹೇಳಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳು ಪ್ರಯಾಗ್ರಾಜ್ ಸಂಗಮ ರೈಲು ನಿಲ್ದಾಣವನ್ನು ಮುಚ್ಚಿದ್ದಾರೆ. ಪ್ರಯಾಣಿಕರ ದಟ್ಟಣೆ ಹೇಗಿದೆಯೆಂದರೆ ರೈಲು ಹತ್ತಲು ಸಾಧ್ಯವಾಗದೇ ರೈಲು ಎಂಜಿನ್ ಅನ್ನು ಏರುತ್ತಿರುವ ವಿಡಿಯೋಗಳು ಕೂಡ ಹರಿದಾಡಲಾರಂಭಿಸಿವೆ. ಈ ಎಲ್ಲ ಕಾರಣಗಳಿಗಾಗಿ ರೈಲು ನಿಲ್ದಾಣವನ್ನು ಮುಚ್ಚಿರುವುದಾಗಿ ನಾರ್ದರ್ನ್ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ಮ್ಯಾನೇಜರ್ ಕುಲದೀಪ್ ತಿವಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Maha Kumbh: ಮಹಾಕುಂಭ ಮೇಳದಲ್ಲಿ ಭೀಕರ ಅಗ್ನಿ ಅವಘಡ
ಉತ್ತರಪ್ರದೇಶ ಸರ್ಕಾರವ ವಿರುದ್ಧ ಟೀಕಾಪ್ರಹಾರ ನಡೆಸಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಸಂಚಾರ ದಟ್ಟಣೆಯಿಂದಾಗಿ ನಗರಕ್ಕೆ ಅವಶ್ಯಕ ವಸ್ತುಗಳ ಪೂರೈಕೆಯಲ್ಲೂ ವ್ಯತ್ಯಯವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಫೆ. 26ರವರೆಗೆ ಮಹಾಕುಂಭಮೇಳ ನಡೆಯಲಿದ್ದು, ಜ.13ರಿಂದ ಈವರೆಗೆ ತ್ರಿವೇಣಿ ಸಂಗಮದಲ್ಲಿ 46 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.