ನವದೆಹಲಿ: ಸೋಮವಾರ ಮುಂಜಾನೆ ದೇಶದ ರಾಜಧಾನಿ ನವದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಭಾರೀ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 4.0 ಎಂದು ದಾಖಲಾಗಿದೆ. ಬೆಳಗ್ಗೆ 5:36ರ ಸಮಯದಲ್ಲಿ ಏಕಾಏಕಿ ಭೂಮಿಯು ಕಂಪಿಸಿದ್ದ, ರಾಜಧಾನಿ ಹಾಗೂ ಹೊರವಲಯದಲ್ಲಿ ನಿವಾಸಿಗಳು ತೀವ್ರ ಕಂಪನಕ್ಕೆ ಬೆಚ್ಚಿಬಿದ್ದಿದ್ದಾರೆ. ಆದರೆ, ಈವರೆಗೆ ಯಾವುದೇ ಸಾವು, ನೋವು, ಆಸ್ತಿಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.
ದೆಹಲಿಯ ಧೌಲಾ ಕುವಾನ್ನ ದುರ್ಗಾಬಾಯಿ ದೇಶಮುಖ್ ಸ್ಪೆಷಲ್ ಎಜುಕೇಷನ್ ಕಾಲೇಜು ಸಮೀಪದಲ್ಲೇ ಭೂಕಂಪದ ಕೇಂದ್ರಬಿಂದು ಇದ್ದು, ಐದು ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ಮಾಡಿದೆ.
ಈ ಪ್ರದೇಶದ ಸಮೀಪವೇ ಒಂದು ಸರೋವರವಿದ್ದು, ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಇಲ್ಲಿ ಅಲ್ಪ ತೀವ್ರತೆಯ ಭೂಕಂಪಗಳು ಸಂಭವಿಸುತ್ತಿರುತ್ತವೆ. 2015ರಲ್ಲಿ 3.3 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕಂಪ ಸಂಭವಿಸಿದ ಸಮಯದಲ್ಲಿ ಭಾರೀ ಶಬ್ದವೂ ಕೇಳಿಸಿಕೊಂಡಿದೆ ಎಂದಿದ್ದಾರೆ.
ನೆರವಿಗೆ ಧಾವಿಸಿದ ದೆಹಲಿ ಪೊಲೀಸ್.
ಭೂಕಂಪದ ಬೆನ್ನಲ್ಲೇ ನೆರವಿಗೆ ಧಾವಿಸಿರುವ ದೆಹಲಿ ಪೊಲೀಸರು, ತುರ್ತು ಪರಿಸ್ಥಿತಿಗಳಿಗಾಗಿ 112 ಸಂಖ್ಯೆಗೆ ಕರೆ ಮಾಡಬೇಕೆಂದು ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.
ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ ಕಟ್ಟಡಗಳ ನಿವಾಸಿಗಳು ಭೂಮಿ ಕಂಪನದ ಅನುಭವವಾಗುತ್ತಿದ್ದಂತೆ ಮನೆಗಳಿಂದ ಹೊರಗೆ ಓಡಿದ್ದಾರೆ.
ನೋಯ್ಡಾ ಸೆಕ್ಟರ್ 20 ರ ಇ ಬ್ಲಾಕ್ ನಲ್ಲಿ ಬೆಳಗಿನ ವಾಕಿಂಗ್ ಹೋಗಿದ್ದ 50 ವರ್ಷದ ಮಹಿಳೆ, “‘ನಾವು ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದೆವು. ಭೂಕಂಪದ ಅನುಭವ ಬಹಳ ತೀವ್ರವಾಗಿತ್ತು. ಜನರೆಲ್ಲ ಆತಂಕದಿಂದ ಹೊರಗೆ ಓಡಿ ಬಂದರು'” ಎಂದು ಹೇಳಿದ್ದಾರೆ. ದೆಹಲಿ-ಎನ್‌ಸಿಆರ್ ನ ಜನರು ಭಯಭೀತರಾಗಿ ತಮ್ಮ ಮನೆಗಳ ಹೊರಗೆ ಕಾಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
- ಪ್ರಧಾನಿ ಮೋದಿ ಟ್ವೀಟ್ *
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನಗಳ ಅನುಭವವಾಗಿದೆ. ಎಲ್ಲರೂ ಶಾಂತವಾಗಿರಿ, ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ಆಪ್ ನಾಯಕಿ, ಮಾಜಿ ಮುಖ್ಯಮಂತ್ರಿ ಆತಿಷಿ ಅವರೂ, “ದೆಹಲಿಯಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.