ಗುನಾ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತ ರಾಜಕೀಯ ಚರ್ಚೆಯು ಮಾರಾಮಾರಿಯಲ್ಲಿ ಅಂತ್ಯಗೊಂಡು, 22 ವರ್ಷದ ಯುವಕನೊಬ್ಬ ತನ್ನ ಸೋದರ ಮಾವಂದಿರ ಕೈಯಿಂದಲೇ ಹತ್ಯೆಯಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ನಡೆದಿದೆ.
ಕ್ಯಾಂಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದಲ್ಲಿರುವ ಪೊಲೀಸ್ ಲೇನ್ ಬಳಿ ಈ ಘಟನೆ ನಡೆದಿದೆ.
ಬಿಹಾರದ ಶಿವಹಾರ್ ಜಿಲ್ಲೆಯ ನಿವಾಸಿ, ಕಾರ್ಮಿಕ ಶಂಕರ್ ಮಾಂಝಿ (22) ತನ್ನ ಸೋದರ ಮಾವಂದಿರಾದ ರಾಜೇಶ್ ಮಾಂಝಿ (25) ಮತ್ತು ತೂಫಾನಿ ಮಾಂಝಿ (27) ಜೊತೆ ವಾಸವಾಗಿದ್ದ.
ಪೊಲೀಸ್ ಠಾಣೆಯ ಉಸ್ತುವಾರಿ ಅನೂಪ್ ಭಾರ್ಗವ ಅವರ ಪ್ರಕಾರ, ಮೃತ ಶಂಕರ್, ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಬೆಂಬಲಿಗನಾಗಿದ್ದರೆ, ಆರೋಪಿಗಳಾದ ರಾಜೇಶ್ ಮತ್ತು ತೂಫಾನಿ, ಜೆಡಿಯು (ಜನತಾ ದಳ ಯುನೈಟೆಡ್) ಬೆಂಬಲಿಗರಾಗಿದ್ದರು. ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯಗಳಿಸಿತ್ತು, ಆರ್‌ಜೆಡಿ ಕೇವಲ 25 ಸ್ಥಾನಗಳಿಗೆ ಕುಸಿದಿತ್ತು. ಈ ಫಲಿತಾಂಶದ ಬಗ್ಗೆ ಮೂವರೂ ಮದ್ಯದ ಅಮಲಿನಲ್ಲಿ ಚರ್ಚೆ ನಡೆಸುತ್ತಿದ್ದರು. ಚರ್ಚೆ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.
ಆಕ್ರೋಶಗೊಂಡ ರಾಜೇಶ್ ಮತ್ತು ತೂಫಾನಿ, ಶಂಕರ್‌ನನ್ನು ಹತ್ತಿರದ ಕೆಸರು ತುಂಬಿದ ಪ್ರದೇಶಕ್ಕೆ ಎಳೆದೊಯ್ದು, ಕೆಳಗೆ ಒತ್ತಿ ಹಿಡಿದಿದ್ದಾರೆ. ಇದರಿಂದಾಗಿ ಶಂಕರ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ತಕ್ಷಣವೇ ಪೊಲೀಸರು ಶಂಕರ್‌ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ಘೋಷಿಸಿದರು.
ಸದ್ಯ ಆರೋಪಿಗಳಾದ ರಾಜೇಶ್ ಮತ್ತು ತೂಫಾನಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಇಬ್ಬರೂ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ಆತ್ಮಹತ್ಯಾ ಬಾಂಬ್’ ಅಲ್ಲ, ಇದು ‘ಶಹಾದತ್ ಕಾರ್ಯಾಚರಣೆ’ : ದೆಹಲಿ ಕಾರು ಬಾಂಬರ್ ಉಮರ್‌ನ ವಿಡಿಯೋ ಬಹಿರಂಗ



















