ಭೋಪಾಲ್: ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾರಾಟ ಮತ್ತು ವಿತರಣೆಯನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿದೆ. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಔಷಧವು “ಕಳಪೆ ಮತ್ತು ಕಲಬೆರಕೆಯಾಗಿದೆ” ಎಂದು ಕಂಡುಬಂದಿದ್ದು, ತೀವ್ರ ಹಾನಿ ಅಥವಾ ಸಾವಿಗೆ ಕಾರಣವಾಗಬಲ್ಲ ವಿಷಕಾರಿ ರಾಸಾಯನಿಕವಾದ ಡೈಥಿಲೀನ್ ಗ್ಲೈಕಾಲ್ ಶೇ.48.6ರಷ್ಟು ಇರುವುದು ದೃಢಪಟ್ಟಿದೆ.
ಛಿಂದ್ವಾರಾ ಜಿಲ್ಲೆಯಲ್ಲಿ 9 ಮಕ್ಕಳ ಸಾವಿಗೆ ಕಾರಣವಾದ ಬ್ಯಾಚ್‌ನ ಮಾದರಿಗಳಲ್ಲಿ ಡೈಥಿಲೀನ್ ಗ್ಲೈಕಾಲ್ (ಡಿಇಜಿ) ಎಂಬ ಅತ್ಯಂತ ವಿಷಕಾರಿ ರಾಸಾಯನಿಕದ ಉಪಸ್ಥಿತಿಯನ್ನು ಪ್ರಯೋಗಾಲಯ ಪರೀಕ್ಷೆಗಳು ದೃಢಪಡಿಸಿದ ನಂತರ, ಮಧ್ಯಪ್ರದೇಶ ಸರ್ಕಾರ ಶನಿವಾರ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸ್ರೆಸನ್ ಫಾರ್ಮಾಸ್ಯುಟಿಕಲ್ ತಯಾರಿಸಿದ ಈ ಸಿರಪ್, “ಕಳಪೆ ಮತ್ತು ದೋಷಪೂರಿತ” ಎಂದು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯದ ಅಕ್ಟೋಬರ್ 2ರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ವರದಿಯಲ್ಲಿ ಏನಿದೆ”?
ಕೋಲ್ಡ್ರಿಫ್ ಸಿರಪ್ ಮಾದರಿಯಲ್ಲಿ ಶೇ.48.6 ಡೈಥಿಲೀನ್ ಗ್ಲೈಕಾಲ್ ಇರುವುದು ವರದಿಯಲ್ಲಿ ಬಹಿರಂಗವಾಗಿದೆ. ಇದು ತೀವ್ರವಾದ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು. ಇದು ಔಷಧಿಯನ್ನು “ಮಾನವ ಬಳಕೆಗೆ ಅಸುರಕ್ಷಿತ”ವಾಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳ ಸಾವಿನ ಬಗ್ಗೆ ವರದಿಯಾದ ನಂತರ, ಮಧ್ಯಪ್ರದೇಶ ಸರ್ಕಾರವು ಔಷಧ ತಯಾರಿಸುತ್ತಿದ್ದ ಫಾರ್ಮಾ ಕಂಪನಿಯ ಕುರಿತು ತನಿಖೆ ನಡೆಸುವಂತೆ ತಮಿಳುನಾಡು ಅಧಿಕಾರಿಗಳನ್ನು ಕೋರಿತ್ತು. ಶುಕ್ರವಾರ ಬೆಳಗ್ಗೆ ತನಿಖಾ ವರದಿ ಬಂದ ಕೂಡಲೇ ನಿಷೇಧ ಹೇರಲಾಗಿದೆ. ಇದೇ ಕಂಪನಿಯು ತಯಾರಿಸಿದ ಇತರ ಉತ್ಪನ್ನಗಳಿಗೂ ಈ ನಿಷೇಧ ವಿಸ್ತರಿಸಲಾಗಿದೆ.
“ಸರ್ಕಾರದ ಕಟ್ಟುನಿಟ್ಟಿನ ಕ್ರಮ”
ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾರಾಟ, ವಿತರಣೆ ಮತ್ತು ವಿಲೇವಾರಿಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ರಾಜ್ಯ ಔಷಧ ನಿಯಂತ್ರಕರು ಆದೇಶಿಸಿದ್ದಾರೆ. ಲಭ್ಯವಿರುವ ಎಲ್ಲಾ ದಾಸ್ತಾನುಗಳನ್ನು ಸೀಲ್ ಮಾಡಿ ಮುಂದಿನ ಸೂಚನೆ ಬರುವವರೆಗೆ ನಾಶಪಡಿಸದಂತೆ ಅಥವಾ ಮಾರಾಟ ಮಾಡದಂತೆ ನಿರ್ದೇಶನ ನೀಡಲಾಗಿದೆ. ರಾಜ್ಯಾದ್ಯಂತ ಸಿರಪ್‌ನ ಹೆಚ್ಚುವರಿ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಪರೀಕ್ಷಾ ಪ್ರಯೋಗಾಲಯಗಳಿಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
“ಇತರ ರಾಜ್ಯಗಳಲ್ಲೂ ಇದೇ ಆತಂಕ”
ಮಧ್ಯಪ್ರದೇಶದಲ್ಲಿ ಒಂಬತ್ತು, ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ರಾಜಸ್ಥಾನದಲ್ಲಿ ಒಬ್ಬರು ಸೇರಿದಂತೆ ಕನಿಷ್ಠ 12 ಮಕ್ಕಳ ಸಾವಿಗೆ ಕೋಲ್ಡ್ರಿಫ್ ಸಿರಪ್ ಕಾರಣವೆಂಬ ಶಂಕೆ ವ್ಯಕ್ತವಾದ ನಂತರ, ತಮಿಳುನಾಡು ಸರ್ಕಾರವು ಅ.1 ರಿಂದಲೇ ಇದರ ಮಾರಾಟವನ್ನು ನಿಷೇಧಿಸಿತ್ತು. ಈ ಮಕ್ಕಳ ಸಾವನ್ನು “ಅತ್ಯಂತ ದುರಂತ” ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಕಂಪನಿ ಮತ್ತು ಅದರ ಇತರ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಪ್ರಯೋಗಾಲಯ ವರದಿ ಬಂದ ತಕ್ಷಣವೇ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.