ಆನೇಕಲ್: ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ಉಂಟಾದ ಅವಘಡದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 2ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ಇನ್ನೂ ನಾಲ್ಕೈದು ಜನ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಗಾಯಾಳುಗಳ ಸಂಬಂಧಿಕರು ಪರದಾಡುತ್ತಿದ್ದು, ಅವಘಡ ಸಂಭವಿಸಿ 24 ಗಂಟೆ ಕಳೆದರೂ ಘಟನಾ ಸ್ಥಳಕ್ಕೆ ತಾಲೂಕಾಡಳಿತ ಬಂದಿಲ್ಲ ಎನ್ನಲಾಗಿದೆ.
ಈಗಾಗಲೇ ಘಟನೆಯಲ್ಲಿ ತಮಿಳುನಾಡು ಹೊಸೂರಿನ ಲೋಹಿತ್(24) ಮತ್ತು ಜ್ಯೋತಿ(11) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ದೊಡ್ಡನಾಗಮಂಗಲ ಗ್ರಾಮಸ್ಥರು ತೇರನ್ನು ಕಟ್ಟಿ ಎತ್ತುಗಳ ಮೂಲಕ ಎಳೆದುಕೊಂಡು ಹುಸ್ಕೂರಿನತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ತೇರು ನೆಲಕ್ಕೆ ಉರುಳುತ್ತಿದ್ದಂತೆ ಜನರು ಚದುರಿ, ಓಡಿ ಹೋಗಿದ್ದಾರೆ.
ದೊಡ್ಡನಾಗಮಮಂಗಲ ತೇರು ನೆಲಕ್ಕುರುಳಿದ ಕೆಲ ತಾಸಿನಲ್ಲಿಯೇ ಮತ್ತೊಂದು ರಾಯಸಂದ್ರ ತೇರು ಬಿರುಗಾಳಿಯಿಂದಾಗಿ ನೆಲಕ್ಕೆ ಉರುಳಿತು. ಹೀಗಾಗಿ ವಾಹನಗಳು ಜಖಂಗೊಂಡವು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.