ಮದ್ದೂರು (ಮಂಡ್ಯ ಜಿಲ್ಲೆ): ‘ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಿದ ಮುಲ್ಲಾಗಳು ಯಾರೇ ಆಗಲಿ ಅವರ ವಿರುದ್ಧ ಕೂಡಲೇ ಸೂಕ್ತ ಕ್ರಮ ವಹಿಸಬೇಕು ಮತ್ತು ಮಸೀದಿಗಳನ್ನು ಮುಚ್ಚಿಸಬೇಕು’ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದ್ದಾರೆ.
ಇಂದು(ಸೋಮವಾರ) ಮಂಡ್ಯದ ಮದ್ದೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಂಹ, ‘ಚುನಾವಣೆ ಸಂದರ್ಭದಲ್ಲಿ ಕದಲೂರು ಉದಯ್ (ಮದ್ದೂರು ಶಾಸಕ) ಅವರಿಂದ ದುಡ್ಡು ಪಡೆದು ಮತ ಮಾರಿಕೊಂಡಿದ್ದೀರಿ, ಜೂಜು ಆಡಿಸುವವರನ್ನು ಗೆಲ್ಲಿಸಿದ್ದೀರಿ. ಅದಕ್ಕೆ ಈ ಪರಿಸ್ಥಿತಿ ಬಂದಿದೆ’ ಎಂದು ಟೀಕಿಸಿದ್ದಾರೆ.
‘ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಸುತ್ತಿದೆ. ಡಿ.ಜೆ. ಹಳ್ಳಿ- ಕೆ.ಜಿ. ಹಳ್ಳಿ ಘಟನೆಯಲ್ಲಿ ಹಲವಾರು ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿದೆ. ಪೊಲೀಸರ ಬಂದೋಬಸ್ತ್ ಇದ್ದರೂ ಮದ್ದೂರಿನಲ್ಲಿ ಈ ರೀತಿಯ ದುರ್ಘಟನೆ ನಡೆದಿರುವುದು ವಿಪರ್ಯಾಸ’ ಎಂದಿದ್ದಾರೆ.
‘ಬಂಧಿಸಲಾಗಿರುವ ಹಿಂದುತ್ವ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಗಣೇಶ ವಿಸರ್ಜನೆ ವೇಳೆ ಇದ್ದ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.