ಬೆಂಗಳೂರು: ಸನ್ ರೈಸರ್ಸ್ ಹೈದರಾಬಾದ್ ಆರ್ಭಟಕ್ಕೆ ಲಕ್ನೋ ಬ್ರೇಕ್ ಹಾಕಿದೆ. ಹೈದರಾಬಾದ್ ತಂಡವು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ತನ್ನ ತವರಿನಲ್ಲೇ ಸೋಲಿನ ಆಘಾತ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ 190 ರನ್ ಗಳಿಸಿತು. ಕಠಿಣ ಗುರಿ ಪಡೆದ ಲಕ್ನೋ ತಂಡ ಸುಲಭ ಜಯ ಸಾಧಿಸಿತು. ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ಚಮತ್ಕಾರ ತೋರಿಸಿದರೆ, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಬ್ಯಾಟಿಂಗ್ ನಲ್ಲಿ ಮಿಂಚಿ ತಂಡಕ್ಕೆ ಗೆಲುವಿನ ಕೊಡುಗೆ ನೀಡಿದರು.
ಹೈದರಾಬಾದ್ ತಂಡದ ಆರ್ಭಟಕ್ಕೆ ಆರಂಭದಲ್ಲಿ ಶಾರ್ದೂಲ್ ಠಾಕೂರ್ ಬ್ರೇಕ್ ಹಾಕಿದರು. ತಮ್ಮ ಎರಡನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ನಂತರ ಇಶಾನ್ ಕಿಶನ್ ರನ್ನು ಔಟ್ ಮಾಡುವ ಮೂಲಕ ಲಕ್ನೋ ತಂಡಕ್ಕೆ ಉತ್ತಮ ಆರಂಭ ನೀಡಿದರು. ಟ್ರಾವಿಸ್ ಹೆಡ್ ಎಂದಿನಂತೆ ತಮ್ಮ ಆಟ ಮುಂದುವರೆಸಿದ್ದರು. ಆದರೆ, ಅವರು ಔಟ್ ಆದ ನಂತರ ಹೈದರಾದ್ ಆರ್ಭಟ ಕಡಿಮೆಯಾಗುತ್ತ ಸಾಗಿತು. ಹೆಡ್ 47 ರನ್ ಗಳಿಸಿ ಔಟ್ ಆದರು. ನಿತೀಶ್ ಕುಮಾರ್ ರೆಡ್ಡಿ 32 ರನ್ ಗಳಿಸಿ ಔಟಾದರೆ, ದುರದೃಷ್ಟವಶಾತ್ ಕ್ಲಾಸೆನ್ 26 ರನ್ ಗಳಿಸಿ ರನೌಟ್ ಆದರು. ಅನಿಕೇತ್ ವರ್ಮಾ 13 ಎಸೆತಗಳಲ್ಲಿ 5 ಸಿಕ್ಸರ್‌ಗಳ ಸಹಾಯದಿಂದ 36 ರನ್ ಗಳಿಸಿದರು. ಪರಿಣಾಮ ಹೈದರಾಬಾದ್ ತಂಡ 190 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಲಕ್ನೋ ತಂಡ ಹೈದರಾಬಾದ್ ಗೆ ತಕ್ಕ ಉತ್ತರ ಕೊಡಲು ಆರಂಭಿಸಿತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ತಾವು ಸ್ಫೋಟಕ ಬ್ಯಾಟ್ಸಮನ್ ಗಳು ಎಂಬುವುದನ್ನು ಹೈದರಾಬಾದ್ ಗೆ ತೋರಿಸಿದರು. ಪೂರನ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಈ ಸೀಸನ್ನ ಅತ್ಯಂತ ವೇಗದ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು. ಪೂರನ್ ಮತ್ತು ಮಾರ್ಷ್ ಕೇವಲ 19 ಎಸೆತಗಳಲ್ಲಿ ಐವತ್ತು ರನ್ಗಳ ಜೊತೆಯಾಟ ಪೂರೈಸಿದರು. 7.3 ಓವರ್‌ಗಳಲ್ಲಿ ಲಕ್ನೋ ತಂಡ 100 ರನ್‌ಗಳ ಗಡಿ ತಲುಪಿತು. ಇದರಲ್ಲಿ ಮಿಚೆಲ್ ಮಾರ್ಷ್ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಪೂರನ್ 26 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು. ಪರಿಣಾಮ ಲಕ್ನೋ 5 ವಿಕೆಟ್ ಗಳ ಜಯ ಸಾಧಿಸಿತು.