2024 ರ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯಾಂಕಾ ಹಾಗೂ ಆಗಿನ ತಂಡದ ನಾಯಕ ಕೆಎಲ್ ರಾಹುಲ್ ನಡುವೆ ಬಹಿರಂಗವಾಗಿ ಮಾತಿನ ಚಕಮಕಿ ನಡೆದಿತ್ತು. ದೊಡ್ಡ ವೈರಲ್ ಆಗಿತ್ತು. ರಾಹುಲ್ ಕೊನೆಗೂ ಮೌನ ಮುರಿದಿದ್ದು, ಆ ಘಟನೆ ಇಡೀ ತಂಡದ ಮೇಲೆ ಪರಿಣಾಮ ಬೀರಿತು ಎಂದಿದ್ದಾರೆ.
ರಾಹುಲ್ ಅವರು 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿದ್ದರು. ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಪ್ರತಿನಿಧಿಸಿದಲ್ಲದೆ, ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ರಾಹುಲ್ ಕೂಡ ಆಟಗಾರನಾಗಿ ಮತ್ತು ನಾಯಕನಾಗಿ ಎಡವಿದ್ದರು. ಹೀಗಾಗಿ ಗೋಯಾಂಕಾ ಅವರಿಗೆ ಬೇಸರವಿತ್ತು.
ಜೊತೆಗೆ ಕಳೆದ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆಗ ತಂಡದ ಮಾಲೀಕ ಸಂಜೀವ್ ಗೋಯಾಂಕ, ನಾಯಕ ರಾಹುಲ್ ರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಸದ್ಯ ಆ ತಂಡದಿಂದ ಹೊರ ಬಂದಿರುವ ರಾಹುಲ್ ಆ ಕುರಿತು ಮಾತನಾಡಿದ್ದಾರೆ. ಪಂದ್ಯದ ನಂತರ ಮೈದಾನದಲ್ಲಿ ಏನೇ ನಡೆದರೂ ಅದು ಒಳ್ಳೆಯದಲ್ಲ. ಅಂತಹದನ್ನು ಮೈದಾನದ ಒಳಗೆ ಅಥವಾ ಹೊರಗೆ ನೋಡಲು ಯಾರೂ ಇಷ್ಟಪಡುವುದಿಲ್ಲ. ಇದು ಇಡೀ ಗುಂಪಿನ ಮೇಲೆ ಪರಿಣಾಮ ಬೀರಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಸೀಸನ್ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ನನಗೆ ಉತ್ತಮ ಪ್ರದರ್ಶನ ನೀಡಲು ಆಗಿಲ್ಲ. ಳೆದ ಮೂರು ಸೀಸನ್‌ಗಳಲ್ಲಿ ಮೊದಲ ಬಾರಿಗೆ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಆಟದಲ್ಲಿ ಸ್ವಾತಂತ್ರ್ಯ ಬೇಕು ಎಂಬ ಕಾರಣಕ್ಕೆ ಲಕ್ನೋ ತಂಡ ತೊರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ನಾನು ಹೊಸ ಆರಂಭವನ್ನು ಮಾಡಲು ಬಯಸುತ್ತೇನೆ. ನಾನು ನನ್ನ ಆಟವನ್ನು ಸ್ವತಂತ್ರವಾಗಿ ಆಡಬಹುದಾದ ನನ್ನ ಸ್ವಂತ ಆಯ್ಕೆಗಳನ್ನು ಹುಡುಕಲು ನಾನು ಬಯಸುತ್ತೇನೆ. ಲಕ್ನೋ ತಂಡದಲ್ಲಿ ನಾನು ಬಯಸಿದ ವಾತಾವರಣವಿರಲಿಲ್ಲ ಎಂದಿದ್ದಾರೆ.