ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದ ಅಂಜಲಿ ಬಾಯಿ ಶಿಂಧೆ ಹಾಗೂ ಆಕಾಶ್ ದಂಪತಿಯ ವಿಡಿಯೋಗಳನ್ನು ಕೋಟ್ಯಂತರ ಮಂದಿ ನೋಡಿರುತ್ತಾರೆ. ಈ ದಂಪತಿಯ ಕಥೆ ಎಲ್ಲ ಪ್ರೇಮಿಗಳಿಗೂ ಸ್ಫೂರ್ತಿ ಆಗುವಂತದ್ದು. ಯಾವುದೇ ಸಂದರ್ಭ ಬಂದರೂ ಪ್ರೀತಿಸಿದವರನ್ನು ಕೈ ಬಿಡಬಾರದು ಎಂಬುದನ್ನು ಈ ಜೋಡಿಯನ್ನು ನೋಡಿ ಕಲಿಯಬೇಕು. ಅವರದ್ದೇ ಬದುಕನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ‘ಲವ್ ಯೂ ಮುದ್ದು’ ಸಿನಿಮಾ ಮಾಡಲಾಗಿದ್ದು, ಈ ಸಿನಿಮಾಗೆ ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಿನಿಮಾವನ್ನು ಕಿಶನ್ ಅವರು ನಿರ್ಮಾಣ ಮಾಡಿದ್ದು, ಸಿದ್ದು ಮತ್ತು ರೇಷ್ಮಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಕುಮಾರ್ ಅವರು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಬಾರಿ ಅವರು ನೈಜ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಹಾಗಂತ ಇದನ್ನು ಅವರು ಡಾಕ್ಯುಮೆಂಟರಿಯ ರೀತಿ ತೋರಿಸಿಲ್ಲ. ಒಂದು ಸಿನಿಮಾಗೆ ಬೇಕಾದಂತಹ ಎಲ್ಲ ಅಂಶಗಳನ್ನು ಆ ಕಥೆಗೆ ಸೇರಿಸಿದ್ದಾರೆ. ಆ ಮೂಲಕ ಒಂದು ಮನರಂಜನಾತ್ಮಕ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ.
ಕರ್ಣ (ಸಿದ್ದು) ಹಾಗೂ ಸುಮತಿ (ರೇಷ್ಮಾ) ನಡುವೆ ಅನಿರೀಕ್ಷಿತವಾಗಿ ಪ್ರೀತಿ ಮೂಡುತ್ತದೆ. ಆದರೆ ನಂತರದಲ್ಲೇ ಅಷ್ಟೇ ಅನಿರೀಕ್ಷಿತವಾದ ತಿರುವುಗಳು ಎದುರಾಗುತ್ತವೆ. ಮದುವೆ ಆಗಬೇಕು ಎಂಬ ಕನಸು ಕಂಡಿದ್ದ ಸುಮತಿಗೆ ಅಪಘಾತ ಆಗುತ್ತದೆ. ಅದರಿಂದ ಅವಳು ಕೋಮ ಸ್ಥಿತಿ ತಲುಪುತ್ತಾಳೆ. ಆಕೆಯನ್ನು ಮಗುವಿನ ರೀತಿಯಲ್ಲಿ ಆರೈಕೆ ಮಾಡಲು ಕರ್ಣ ಎದುರಿಸುವ ಸವಾಲುಗಳು ಒಂದೆರಡಲ್ಲ. ಅಂಥ ಪರಿಸ್ಥಿತಿಯಲ್ಲೂ ಅವಳನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆ ಆಗುವ ಆಲೋಚನೆ ಆತನ ಮನಸ್ಸಿನಲ್ಲಿ ಬರುವುದಿಲ್ಲ. ಒಂದಲ್ಲ ಒಂದು ದಿನ ತನ್ನ ಪ್ರೇಯಸಿ ಮೊದಲಿನಂತೆ ಆಗುತ್ತಾಳೆ ಎಂಬ ಭರವಸೆಯಲ್ಲಿ ಕರ್ಣ ಎಲ್ಲ ಪ್ರಯತ್ನಗಳನ್ನು ಮಾಡುತ್ತಾನೆ.

ಪ್ರೀತಿಸುವ ಎಲ್ಲ ಹೃದಯಗಳಿಗೆ ಈ ಸಿನಿಮಾ ಹತ್ತಿರ ಆಗುತ್ತದೆ. ನಿಜವಾದ ಪ್ರೀತಿಯ ಅರ್ಥವನ್ನು ಕಂಡುಕೊಳ್ಳಲು ಸಹಕಾರಿ ಆಗುತ್ತದೆ. ಎಮೋಷನಲ್ ಪ್ರೇಕ್ಷಕರ ಕಣ್ಣುಗಳನ್ನು ತೇವ ಮಾಡುತ್ತದೆ. ‘ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲ ಎಂದಮೇಲೆ ಪ್ರೀತಿಯನ್ನೇ ಮಾಡೋಕೆ ಹೋಗಬಾರದು. ಪ್ರೀತಿಸಿದ ಮೇಲೆ ಯಾವ ಕಾರಣಕ್ಕೂ ಕೈ ಬಿಡಬಾರದು’ ಎಂಬ ಸಂದೇಶವನ್ನು ಎಲ್ಲ ಪ್ರೇಮಿಗಳಿಗೂ ಈ ಸಿನಿಮಾ ನೀಡುತ್ತದೆ.
ನಟ ಸಿದ್ದು ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಟಿ ರೇಷ್ಮಾ ಕೂಡ ಸುಮತಿ ಎಂಬ ಪಾತ್ರವನ್ನು ಜೀವಿಸಿದ್ದಾರೆ. ಕಾರ್ಕಳದ ಸುಂದರ ಪರಿಸರದಲ್ಲಿ ಈ ಸಿನಿಮಾದ ಬಹುಪಾಲು ಕಥೆ ಸಾಗುತ್ತದೆ. ಅನಿರುದ್ಧ ಶಾಸ್ತ್ರಿ ಅವರ ಸಂಗೀತ, ಕೃಷ್ಣ ದೀಪಕ್ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ನೈಜ ಘಟನೆಯನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿದ್ಧಪಡಿಸಿದ ಕಥೆಯಲ್ಲಿ ನಿರ್ದೇಶಕ ಕುಮಾರ್ ಅವರು ಕೆಲವು ಟ್ವಿಸ್ಟ್ಗಳನ್ನು ನೀಡಿದ್ದಾರೆ. ಇದರಿಂದ ಸಿನಿಮಾದ ಮನರಂಜನೆಯ ಗುಣ ಹೆಚ್ಚಿದೆ.
ಇದನ್ನೂ ಓದಿ:‘ಕಾಂತಾರ ಚಾಪ್ಟರ್-1’ ಚಿತ್ರತಂಡಕ್ಕೆ ಸಕ್ಸಸ್ ಪಾರ್ಟಿ ನೀಡಿದ ಹೊಂಬಾಳೆ ಫಿಲ್ಮ್ಸ್



















