ಬಾಗಲಕೋಟೆ: ಫೇಸ್ ಬುಕ್ ಮೂಲಕ ಆರಂಭವಾದ ಪ್ರೀತಿಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದ ವಿಧವೆ ಮಹಿಳೆ ಮತ್ತು ವಿಜಯಪುರದ ಯುವಕ ಇಬ್ಬರು ಪೇಸ್ ಬುಕ್ ನಲ್ಲಿ ಪರಿಚಯವಾಗಿದ್ದಾರೆ. ಆನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಆರೋಪಿ ಮಹಿಳೆಯಿಂದ ಹಣ ಪಡೆದಿದ್ದಾನೆ. ಮರಳಿ ಕೇಳಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಜೂನ್ 20ರಂದು ಕೃಷ್ಣಾ ನದಿಯಲ್ಲಿ ಮಹಿಳೆಯ ಶವ ಎಸೆಯಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಸತ್ಯ ಹೊರ ಹಾಕಿದ್ದಾರೆ. ರೇವಣಸಿದ್ದಯ್ಯ (26) ಕೊಲೆ ಮಾಡಿದ ಯುವಕ. ಮಮತಾ (48) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಆರೋಪಿ ರೇವಣಸಿದ್ದಯ್ಯ ಮದುವೆಯಾಗುವುದಾಗಿ ಮಮತಾರನ್ನು ನಂಬಿಸಿ ಬಬಲೇಶ್ವರಕ್ಕೆ ಕರೆಸಿಕೊಂಡಿದ್ದಾನೆ.
ನಂತರ ಜೂನ್ 2 ರಂದು ಬೀಳಗಿ ಹತ್ತಿರದ ಕೃಷ್ಣಾ ನದಿ ಕಡೆ ಕರೆದುಕೊಂಡು ಹೋಗಿ, ನದಿಯ ಹತ್ತಿರ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಇತ್ತ ಮಮತಾ ಕಾಣೆಯಾಗಿದ್ದಕ್ಕೆ ಅವರ ಕುಟುಂಬಸ್ಥರು ಶಿವಮೊಗ್ಗದಲ್ಲಿ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ಬೀಳಗಿ ಸಮೀಪದ ಕೃಷ್ಣಾ ನದಿ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಗುರುತು ಪತ್ತೆ ವೇಳೆ ಶವ ಮಮತಾಳದ್ದು ಎಂದು ತಿಳಿದು ಬಂದಿದೆ. ನಂತರ ಫೋನ್ ಕರೆ ಆಧರಿಸಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
