ಮಂಗಳೂರು: ಲವ್-ಸೆಕ್ಸ್ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನ ಪುತ್ರನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆ ಪೊಲೀಸರು (Dakshina Kannada Women Police) ವಶಕ್ಕೆ ಪಡೆದಿದ್ದಾರೆ.
ಪುತ್ತೂರು (Puttur) ಬಿಜೆಪಿ ಘಟಕದ ಪ್ರಭಾವಿ ಮುಖಂಡನ (BJP Leader) ಮಗ ಕೃಷ್ಣ ಜೆ.ರಾವ್ (21) ಬಂಧಿತ ಆರೋಪಿ. ಮೈಸೂರಿನ ಟಿ. ನರಸೀಪುರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಆರೋಪಿ ಕೃಷ್ಣ ಜೆ.ರಾವ್ ಪುತ್ತೂರಿನ ಹೈಸ್ಕೂಲ್‌ವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹುಡುಗಿಯನ್ನು ಪ್ರೀತಿಸುತ್ತಿದ್ದ. 2024ರ ಅ.11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನ ಕರೆದುಕೊಂಡು ಹೋಗಿದ್ದ. ಈ ವೇಳೆ ಮದುವೆಯಾಗುತ್ತೇನೆ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. 2025ರ ಜನವರಿಂದಲೂ ಬಲವಂತವಾಗಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ. ಕೆಲವು ಸಮಯದ ನಂತರ ಯುವತಿ ಗರ್ಭಿಣಿಯಾದ ವಿಚಾರ ಬೆಳಕಿಗೆ ಬಂದಿತ್ತು. ಆದರೆ, ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ.
ನಂತರ ರಾಜಿ ಪಂಚಾಯಿತಿ ನಡೆದಿತ್ತು. ಸಂಧಾನ ನಡೆದಿದ್ದ ಹಿನ್ನೆಲೆ ಆರೋಪಿ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿರಲಿಲ್ಲ. ಯುವಕನಿಗೆ 21 ವರ್ಷ ತುಂಬದ ಹಿನ್ನಲೆ ಮದುವೆಗೆ ಅಡ್ಡಿಪಡಿಸಲಾಗಿತ್ತು. ಜೂನ್ 23ಕ್ಕೆ 21 ವರ್ಷ ತುಂಬಿತ್ತು. ಆದರೂ ಮದುವೆಗೆ ಯುವಕ ಹಿಂದೇಟು ಹಾಕಿದ್ದ. ಹೀಗಾಗಿ ಮಂಗಳೂರಿನ ಖಾಸಗಿ ಕಾಲೇಜಿನ ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆನಂತರ ಆರೋಪಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ.