ಬೆಂಗಳೂರು : ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಓಟಿಪಿ’ ಇದೇ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಲವ-ಲವಿಕೆಯಿಂದ ನಿರ್ದೇಶಕರು ತೆರೆಗೆ ತಂದಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಬಂದ ಹೊರತಾಗಿಯೂ ಚಿತ್ರಮಂದಿರಗಳಿಗೆ ಜನ ಬಂದಿಲ್ಲ. ಇದು ನಟ ಅನೀಶ್ ಅವರಿಗೆ ಬೇಸರ ತರಿಸಿದ್ದು, ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

‘ನನ್ನ ಹದಿನಾರು ವರ್ಷದ ನಟನಾ ವೃತ್ತಿ ಜೀವನದಲ್ಲಿ ಇಷ್ಟು ಒಳ್ಳೆಯ ವಿಮರ್ಶೆಗಳು ನನ್ನ ಇನ್ಯಾವ ಸಿನಿಮಾಕ್ಕೂ ಸಿಕ್ಕಿರಲಿಲ್ಲ. ಸಿನಿಮಾ ನೋಡಿದವರೆಲ್ಲ ಬ್ಲಾಕ್ ಬಸ್ಟರ್ ವಿಮರ್ಶೆಗಳನ್ನೇ ನೀಡಿದ್ದಾರೆ. ವಿಮರ್ಶೆಗಳನ್ನು ನೋಡಿ ಒಂದೊಳ್ಳೆ ಸಿನಿಮಾ ಕೊಟ್ಟೆವು ಎಂಬ ನೆಮ್ಮದಿಯಲ್ಲಿ ಇದ್ದೆ. ಆದರೆ ಇಂದು ಬೆಳಿಗ್ಗೆ ಕಲೆಕ್ಷನ್ಗಳನ್ನು ನೋಡಿದಾಗ ಬಹಳ ಬೇಸರ ಆಯ್ತು. ನಾನು ಚಿತ್ರರಂಗದಲ್ಲಿ ಇರಬೇಕಾ ಬೇಡವಾ ಎಂಬ ಪ್ರಶ್ನೆಗಳು ನನಗೆ ಹುಟ್ಟಿಕೊಂಡಿವೆ ಎಂದು ನಟ ಅನೀಶ್ ಭಾವುಕರಾಗಿದ್ದಾರೆ.

ನನ್ನಿಂದ ಪ್ರೇಕ್ಷಕರನ್ನು ಸೆಳೆಯಲು ಆಗುತ್ತಿಲ್ಲವಾ ಅನಿಸಲು ಶುರುವಾಗಿದೆ. ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿಬಿಡಬೇಕಾ ಎನಿಸಿದೆ. ಏಕೆಂದರೆ ಎಂಥಹಾ ಒಳ್ಳೆಯ ಸಿನಿಮಾ ಮಾಡಿ, ಅದಕ್ಕೆ ಬಹಳ ಒಳ್ಳೆಯ ವಿಮರ್ಶೆಗಳು ಬಂದಿದ್ದರೂ ಸಹ ಜನರನ್ನು ರೀಚ್ ಆಗಲು ಆಗುತ್ತಿಲ್ಲ. ಸಿನಿಮಾ ನೋಡಿದ ಪತ್ರಕರ್ತ ಮಿತ್ರರು ಕರೆ ಮಾಡಿ ಖುಷಿ ವ್ಯಕ್ತಪಡಿಸಿದರು. ಒಳ್ಳೆಯ ಸಿನಿಮಾ ಮಾಡಿದ್ದೀರಿ ಎಂದು ಆದರೆ ಜನ ಬರುತ್ತಿಲ್ಲ ಎಂಬುದು ಅವರಿಗೇ ಶಾಕ್ ಆಗಿದೆ ಎಂದು ಅನೀಶ್ ಹೇಳಿದ್ದಾರೆ.
‘ನನ್ನ ‘ಅಕಿರ’, ‘ವಾಸು ನಾನ್ ಪಕ್ಕಾ ಲೋಕಲ್’ ಇತ್ತೀಚೆಗಿನ ‘ಆರಾಮ್ ಅರವಿಂದ ಸ್ವಾಮಿ’ ಅಂತಹಾ ಸಿನಿಮಾಗಳನ್ನು ನೋಡಿ ನನ್ನ ಮೇಲೆ ನಂಬಿಕೆ ಇರಿಸಿಕೊಂಡವರಿಗೆ ಹೇಳುತ್ತಿದ್ದೇನೆ. ಮುಂದಿನ ವಾರ ನೋಡುತ್ತೀನಿ, ಒಟಿಟಿಗೆ ಬಂದ ಮೇಲೆ ನೋಡುತ್ತೀನಿ ಎಂದೆಲ್ಲ ಅಂದುಕೊಳ್ಳಬೇಡಿ. ಯಾಕೆಂದರೆ ನನಗೆಂದೂ ಯಾರೂ ಇಲ್ಲ. ನಾನು ಒಬ್ಬಂಟಿ, ನಟನೆ ಜೊತೆಗೆ ಎಲ್ಲವನ್ನೂ ನಾನೇ ಮಾಡಬೇಕು. ಹಣ ಕೊಟ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಉಳಿಸಿಕೊಳ್ಳಲು ಆಗುವುದಿಲ್ಲ. ನನ್ನನ್ನು ಉಳಿಸಬೇಕು ಎಂದರೆ ಈ ಎರಡು ದಿನಗಳು ಮಾತ್ರವೇ ಇರುವುದು. ಇದು ಮಿಸ್ ಆದರೆ, ಇದು ನನ್ನ ಕೊನೆಯ ಪ್ರಯತ್ನ ಎನಿಸಿಕೊಳ್ಳುತ್ತೆ’ ಎಂದು ಅನೀಶ್ ಬೇಸರ ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಯಾದಗಿರಿ | ಹಲ್ಲೆಗೊಳಗಾಗಿದ್ದ SDA ಮಹಿಳಾ ಅಧಿಕಾರಿ ಸಾವು.. ನಾಲ್ವರು ಆರೋಪಿಗಳ ಬಂಧನ!



















