ಪಾಟ್ನಾ: ಬಿಹಾರದ ಮುಂಗೇರ್ನಲ್ಲಿ ಬಜರಂಗದಳ ಆಯೋಜಿಸಿದ್ದ ಮಹಾ ಶಿವರಾತ್ರಿ ಮೆರವಣಿಗೆಯಲ್ಲಿ “ಲವ್ ಜಿಹಾದ್” ಥೀಮ್ ಹೊಂದಿದ್ದ ಸ್ತಬ್ಧಚಿತ್ರವು ಭಾರೀ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.
ಮಹಾಶಿವರಾತ್ರಿ ನಿಮಿತ್ತ ಬುಧವಾರ ರಾತ್ರಿ ಬಿಹಾರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು. 50 ಕ್ಕೂ ಹೆಚ್ಚು ಸ್ತಬ್ಧಚಿತ್ರಗಳನ್ನು ಒಳಗೊಂಡ ಭವ್ಯ ಮೆರವಣಿಗೆಯು ನಗರದಾದ್ಯಂತ ಸಂಚರಿಸಿತ್ತು. ಈ ಪೈಕಿ ಒಂದು ಸ್ತಬ್ಧಚಿತ್ರವು “ಲವ್ ಜಿಹಾದ್” ಥೀಮ್ ಅನ್ನು ಒಳಗೊಂಡಿತ್ತು. ಹಿಂದೂ ಹೆಣ್ಣುಮಕ್ಕಳ ಮೇಲೆ ಮುಸ್ಲಿಮರು ದೌರ್ಜನ್ಯ ಎಸಗುತ್ತಿರುವಂತೆ ಅದರಲ್ಲಿ ಚಿತ್ರಿಸಲಾಗಿತ್ತು. ಜೊತೆಗೆ ಒಂದು ರೆಫ್ರಿಜರೇಟರ್ನೊಳಗೆ ಮಹಿಳೆಯರ ದೇಹಗಳನ್ನು ಕತ್ತರಿಸಿಟ್ಟಿರುವಂತೆ ಬಿಂಬಿಸುವ ಗೊಂಬೆಗಳನ್ನು ಇಡಲಾಗಿತ್ತು. ಅಲ್ಲದೇ ಹಿಂದೂ ಮಹಿಳೆಯರ ಮೇಲಾದ ಅಪರಾಧಗಳಿಗೆ ಸಂಬಂಧಿಸಿ ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ನ್ಯೂಸ್ ಪೇಪರ್ ಕಟ್ಟಿಂಗ್ ಗಳನ್ನೂ ಪ್ರದರ್ಶಿಸಲಾಗಿತ್ತು. “ನೀವು ನಿಮ್ಮ ಧರ್ಮವನ್ನು ತ್ಯಜಿಸಿದರೆ, ನೀವು ಛಿದ್ರಗೊಳ್ಳುತ್ತೀರಿ” ಎಂದೂ ಬರೆಯಲಾಗಿತ್ತು.
ಈ ಸ್ತಬ್ಧಚಿತ್ರಕ್ಕೆ ಬಿಹಾರದ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಆಡಳಿತಾರೂಢ ಜೆಡಿಯು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ ಎಂದು ಆರ್ಜೆಡಿ ನಾಯಕ ಮೃತ್ಯುಂಜಯ್ ತಿವಾರಿ ಕಿಡಿಕಾರಿದ್ದಾರೆ.
“ಬಿಹಾರದ ವಾತಾವರಣವನ್ನು ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ… ಗಲಭೆಗಳನ್ನು ಪ್ರಚೋದಿಸಲು ಪಿತೂರಿ ನಡೆಯುತ್ತಿದೆ… ಶಿವರಾತ್ರಿಯಂದು ‘ಲವ್ ಜಿಹಾದ್’ ಥೀಮ್ ಅನ್ನು ತೋರಿಸುವ ಅಗತ್ಯವೇನಿತ್ತು? ಬಿಹಾರದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ ನಡೆಯುವುದಿಲ್ಲ ಎಂದು ನಿತೀಶ್ ಕುಮಾರ್ ಹೇಳುತ್ತಾರೆ. ಹಾಗಿದ್ದರೆ ಜೆಡಿಯು ಪಕ್ಷವು ಬಜರಂಗದಳ-ಬಿಜೆಪಿ ರೂಪಿಸಿದ್ದ ಈ ಸ್ತಬ್ಧಚಿತ್ರವನ್ನು ಒಪ್ಪುತ್ತದೆಯೇ? ಎಂದೂ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಈ ಮೆರವಣಿಗೆಯನ್ನು ಸಮರ್ಥಿಸಿಕೊಂಡಿರುವ ಎಲ್ಜೆಪಿ(ಆರ್) ನಾಯಕ ಧೀರೇಂದ್ರ ಮುನ್ನಾ, ಶಿವರಾತ್ರಿ ಕಾರ್ಯಕ್ರಮದ ಭಾಗವಾಗಿ ಅನೇಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಆ ಪೈಕಿ ಒಂದನ್ನೇ ಹಿಡಿದುಕೊಂಡು ವಿವಾದ ಎಬ್ಬಿಸುವುದು ಸರಿಯಲ್ಲ. ಅಲ್ಲದೇ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ” ಎಂದಿದ್ದಾರೆ.
ಹಿಂದೂಸ್ತಾನಿ ಅವಾಮ್ ಮೋರ್ಚಾ ನಾಯಕ ಶ್ಯಾಮ್ ಸುಂದರ್ ಶರಣ್ ಕೂಡ ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದು, “ಬಿಹಾರದಲ್ಲಿ ಕಾನೂನು ವ್ಯವಸ್ಥೆಗೆ ಯಾವುದೇ ಭಂಗವಾಗಿಲ್ಲ. ಸರ್ಕಾರ ಎಲ್ಲದರ ಮೇಲೆ ಕಣ್ಣಿಟ್ಟಿದೆ. ಎಲ್ಲವನ್ನೂ ಗಮನಿಸುತ್ತಿದೆ. ಬಿಹಾರದ ಸಾಮರಸ್ಯಕ್ಕೆ ಭಂಗ ತರಲು ನಾವು ಬಿಡುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕಿದೆ, ಆದರೆ ಸಾಮರಸ್ಯಕ್ಕೆ ಭಂಗವಾಗದಂತೆ ಸರ್ಕಾರ ನೋಡಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.