ಐಜ್ವಾಲ್: ತಮ್ಮ ಈಶಾನ್ಯ ಭೇಟಿಯ ವೇಳೆ ಐಜ್ವಾಲ್‌ನಲ್ಲಿ ವಂದೇ ಮಾತರಂ ಅನ್ನು ಹಾಡಿ ಎಲ್ಲರ ಹೃದಯ ಗೆದ್ದ 7 ವರ್ಷದ ಮಿಜೋರಾಂ ಪ್ರತಿಭೆ ಎಸ್ತರ್ ಲಾಲ್ದುಹಾವ್ಮಿ ಹನಾಮ್ಟೆ ಎಂಬ ಬಾಲಕಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಭಾನುವಾರ ಗಿಟಾರ್‌ವೊಂದನ್ನು ಉಡುಗೊರೆಯಾಗಿ(Viral News) ನೀಡಿದ್ದಾರೆ.
“ಭಾರತದ ಮೇಲಿನ ಪ್ರೀತಿ ನಮ್ಮೆಲ್ಲರನ್ನೂ ಒಂದುಗೂಡಿಸುತ್ತದೆ. ಮಿಜೋರಾಂನ “ವಂಡರ್ ಕಿಡ್”(ಅಚ್ಚರಿಯ ಬಾಲೆ) ಎಸ್ತರ್ ಲಾಲ್ದುಹಾವ್ಮಿ ಹನಮ್ಟೆ ಇಂದು ವಂದೇ ಮಾತರಂ ಹಾಡಿದ್ದನ್ನು ಕೇಳಿ ನನ್ನ ಮನ ತುಂಬಿ ಬಂತು. ಭಾರತ ಮಾತೆಯ ಮೇಲೆ ಈ 7 ವರ್ಷದ ಮಗುವಿಗಿರುವ ಪ್ರೀತಿಯು ಅವಳ ಹಾಡಿನಲ್ಲೇ ವ್ಯಕ್ತವಾಯಿತು. ಆಕೆಯ ಸುಮಧುರ ಧ್ವನಿಯು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು” ಎಂದು ಅಮಿತ್ ಶಾ ಅವರು ಎಕ್ಸ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮಿಜೋರಾಂನ ಬಾಲ ಗಾಯಕಿ ಹನಾಮ್ಟೆ ಅವರು 2020ರಲ್ಲಿ ‘ಮಾ ತುಜೆ ಸಲಾಮ್’ ಹಾಡನ್ನು ಹಾಡಿದ ವೀಡಿಯೊ ವೈರಲ್ ಆದ ನಂತರ ಮೊದಲ ಬಾರಿಗೆ ಆಕೆ ದೇಶದ ಗಮನ ಸೆಳೆದಳು. ಆಕೆಯ ಧ್ವನಿ ಮತ್ತು ದೇಶಭಕ್ತಿಯು ವ್ಯಾಪಕ ಮೆಚ್ಚುಗೆಯನ್ನು ಗಳಿಸಿತ್ತು. ಇದಾದ ಬಳಿಕ ರಾಜ್ಯಪಾಲರಿಂದಲೂ ವಿಶೇಷ ಗೌರವಕ್ಕೆ ಪಾತ್ರಳಾದ ಆಕೆಗೆ ಮಿಜೋರಾಂ ಸರ್ಕಾರ ಹಲವು ಪ್ರಶಸ್ತಿಗಳನ್ನೂ ನೀಡಿತ್ತು. ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರೂ ಈ ಬಾಲಕಿಯ ಹಾಡಿಗೆ ತಲೆದೂಗಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ತದನಂತದ ಈ ಬಾಲಕಿಯು ಸಾಮಾಜಿಕ ಜಾಲತಾಣಗಳಿಗೂ ಪ್ರವೇಶ ಪಡೆದಿದ್ದು, 1,69,000 ಫಾಲೋವರ್ ಗಳನ್ನು ಹೊಂದಿದ್ದಾಳೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 14 ರಿಂದ ಮೂರು ದಿನಗಳ ಅಸ್ಸಾಂ ಪ್ರವಾಸದಲ್ಲಿದ್ದಾರೆ. ಮಾರ್ಚ್ 15ರ ಶನಿವಾರ ಅವರು ಮಿಜೋರಾಂಗೆ ಭೇಟಿ ನೀಡಿದ್ದು, ಅಲ್ಲಿ ಅವರು ಅಸ್ಸಾಂ ರೈಫಲ್ಸ್‌ನ ಭೂಮಿಯನ್ನು ಮಿಜೋರಾಂ ಸರ್ಕಾರಕ್ಕೆ ವರ್ಗಾಯಿಸುವ ಭೂ ವರ್ಗಾವಣೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಅವರು “ವಂಡರ್ ಕಿಡ್” ಎಂದೇ ಖ್ಯಾತಿ ಗಳಿಸಿರುವ ಎಸ್ತರ್ ಲಾಲ್ದುಹಾವ್ಮಿ ಹನಮ್ಟೆ ಅವರಿಗೆ ಗಿಟಾರ್ ಅನ್ನು ಉಡುಗೊರೆಯಾಗಿ ನೀಡಿದರು.