ಬೆಂಗಳೂರು: ದೇಶದಲ್ಲಿ ನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣಿಸುವಾಗ ಅಚಾನಕಾಗಿ ಲಗೇಜ್ ಮರೆತು ಹೋಗುವವರ ಸಂಖ್ಯೆಯೂ ಜಾಸ್ತಿ ಇರುತ್ತದೆ. ಹೀಗೆ, ರೈಲಿನಲ್ಲಿ ಸಂಚರಿಸುವಾಗ ನಿಮ್ಮ ಲಗೇಜ್ ಮರೆತರೆ, ಅದನ್ನು ಪಡೆಯಲು ಹಲವು ಮಾರ್ಗಗಳಿವೆ. ಹೌದು, ನೀವೇನಾದರೂ ರೈಲಿನಲ್ಲಿ ಪ್ರಯಾಣಿಸುವಾಗ ಲಗೇಜ್ ಮರೆತರೆ, ಅದನ್ನು http://wr.indianrailways.gov.in ಗೆ ಭೇಟಿ ನೀಡಿ ದೂರು ನೀಡುವ ಮೂಲಕ ಮರಳಿ ಪಡೆಯಬಹುದು.
ಹಾಗೆಯೇ, ಲಗೇಜ್ ಗಳನ್ನು ಪತ್ತೆಹಚ್ಚಿಕೊಡಲೆಂದೇ ರೈಲ್ವೆ ಇಲಾಖೆಯು http://railmadad.indianrailways.gov.in/ ಎಂಬ ಪೋರ್ಟಲ್ ಆರಂಭಿಸಿದೆ. ನೀವು ಇಲ್ಲಿಗೆ ಭೇಟಿ ನೀಡಿ ನಿಮ್ಮ ವಿವರ, ಬ್ಯಾಗೇಜ್ ವಿವರವನ್ನು ನೀಡುವ ಮೂಲಕವೂ ಪತ್ತೆಹಚ್ಚಲು ದೂರು ನೀಡಬಹುದು. ರೈಲ್ ಮದದ್ ಎಂಬ ಆ್ಯಪ್ ಕೂಡ ಇದೆ. ಇದನ್ನು ಇನ್ ಸ್ಟಾಲ್ ಮಾಡಿಕೊಂಡು ಕೂಡ ಸಿಬ್ಬಂದಿಗೆ ದೂರು ನೀಡಬಹುದು.
ಹಾಗೆಯೇ, ದಿನದ 24 ಗಂಟೆಯೂ ಲಭ್ಯವಿರುವ, ಸುಮಾರು 10 ಭಾಷೆಗಳಲ್ಲಿ ಮಾಹಿತಿ ನೀಡುವ 139 ಎಂಬ ಸಹಾಯವಾಣಿಗೆ ಕೂಡ ಕರೆ ಮಾಡುವ ಮೂಲಕ ದೂರು ನೀಡಬಹುದು. ಇದಾದ ಬಳಿಕ ಸಿಬ್ಬಂದಿಯು ಆಯಾ ವಿಭಾಗಗಳಿಗೆ ಮಾಹಿತಿ ರವಾನಿಸುವ ಮೂಲಕ ನಿಮ್ಮ ಲಗೇಜ್ ಅನ್ನು ಪತ್ತೆಹಚ್ಚಲು ನೆರವು ನೀಡುತ್ತಾರೆ.
ಲಗೇಜ್ ತೂಕ ಎಷ್ಟಿರಬೇಕು?
ರೈಲುಗಳಲ್ಲಿ ಸಂಚರಿಸುವವರು ಇಷ್ಟೇ ತೂಕದ ಲಗೇಜ್ ಗಳನ್ನು ಕೊಂಡೊಯ್ಯಬೇಕು ಎಂಬ ನಿಯಮ ರೂಪಿಸಲಾಗಿದೆ. ಎಸಿ ಪ್ರಥಮ ದರ್ಜೆ ಟಿಕೆಟ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು 70 ಕೆಜಿ ಲಗೇಜ್ಅನ್ನು ತಮ್ಮೊಂದಿಗೆ ಸಾಗಿಸಲು ಅವಕಾಶವಿದೆ. ಮತ್ತೊಂದೆಡೆ, ಎಸಿ 2-ಟೈರ್ ಸ್ಲೀಪರ್ ಅಥವಾ ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ 50 ಕೆಜಿ ಲಗೇಜ್ ಗಳನ್ನು ಸಾಗಿಸಲು ಅವಕಾಶವಿದೆ. ಎಸಿ 3-ಟೈರ್ ಸ್ಲೀಪರ್/ಎಸಿ ಚೇರ್ ಕಾರ್ ಮತ್ತು ಸ್ಲೀಪರ್ ಕ್ಲಾಸ್ ನ ಮಿತಿ 40 ಕೆಜಿ ವರೆಗೆ ಇದೆ. ಎರಡನೇ ದರ್ಜೆಯ ಪ್ರಯಾಣಿಕರು ಸುಮಾರು 35 ಕೆಜಿ ಲಗೇಜ್ ಗಳನ್ನು ಸಾಗಿಸಲು ಅವಕಾಶವಿದೆ. ಮಿತಿಗಿಂತ ಹೆಚ್ಚಿದ್ದರೆ ಒಂದೂವರೆ ಪಟ್ಟು ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ : ಗಂಭೀರ್ ಮೇಲೆ ಹೆಚ್ಚಿದ ಒತ್ತಡ | ಟೆಸ್ಟ್ ಸೋಲಿನ ಬಳಿಕ ಏಕದಿನ ಸರಣಿ ಗೆಲ್ಲಲೇಬೇಕಾದ ‘ಚಡಪಡಿಕೆ’


















