ಮುಂಬೈ : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅವರೊಬ್ಬ ರಾಜ್ಯ ಕಂಡ ‘ಸಮರ್ಪಿತ ನಾಯಕ’ ಎಂದು ಬಣ್ಣಿಸಿದ್ದಾರೆ. ಬುಧವಾರ ಬೆಳಿಗ್ಗೆ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತಪಟ್ಟ ಸುದ್ದಿ ಕೇಳಿ ಸಚಿನ್ ಮರುಗಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ಅವರು ತಮ್ಮ ಭಾವಪೂರ್ಣ ಸಂತಾಪವನ್ನು ಸಲ್ಲಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಸಂದೇಶದಲ್ಲೇನಿದೆ?
“ಶ್ರೀ ಅಜಿತ್ ಪವಾರ್ ಜಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಮಹಾರಾಷ್ಟ್ರ ರಾಜ್ಯವು ತನ್ನ ಜನರಿಗಾಗಿ ಹಗಲಿರುಳು ಶ್ರಮಿಸಿದ ಒಬ್ಬ ಸಮರ್ಪಿತ ನಾಯಕನನ್ನು ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ನನ್ನ ಹೃದಯಾಳದ ಸಂತಾಪಗಳು. ಓಂ ಶಾಂತಿ,” ಎಂದು ಸಚಿನ್ ಬರೆದುಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಾರಾಮತಿಯಲ್ಲಿ ನಾಲ್ಕು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ಅಜಿತ್ ಪವಾರ್ ತೆರಳುತ್ತಿದ್ದರು. ಮುಂಬೈನಿಂದ ಹೊರಟಿದ್ದ ಅವರ ಚಾರ್ಟರ್ಡ್ ವಿಮಾನ (ಬೊಂಬಾರ್ಡಿಯರ್ ಲಿಯರ್‌ಜೆಟ್ 45) ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಯಿತು. ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಐವರು ಮೃತಪಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶದ ನಾನಾ ಗಣ್ಯರು ಈ ದುರಂತಕ್ಕೆ ಶೋಕ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಅಜಿತ್ ಪವಾರ್ ಅವರ ಅಗಲಿಕೆ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ.
ಇದನ್ನೂ ಓದಿ : ಹಿರಿಯ ನಟ ಜಗ್ಗೇಶ್ ಭೇಟಿಯಾದ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ | ಪಳಾರ್‌ಗೆ ಸನ್ಮಾನಿಸಿದ ನವರಸ ನಾಯಕ


















