ಜ.19ರ ಕಾರ್ಯಕ್ರಮ ಜ.23ಕ್ಕೆ ಮುಂದೂಡಿಕೆ
ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ (Los Angeles) ನಲ್ಲಿ ಕಾಡ್ಗಿಚ್ಚಿನ ಪ್ರತಾಪ ಮುಂದುವರಿದಿದ್ದು, ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಆಸ್ಕರ್ ನಾಮನಿರ್ದೇಶನ ಘೋಷಣೆಯ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ. ಕಾಡ್ಗಿಚ್ಚಿನಿಂದಾಗಿ ಎಲ್ಲವೂ ಅಲ್ಲೋಲಕಲ್ಲೋಲವಾಗಿರುವ ಕಾರಣ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸಸ್ ಆಸ್ಕರ್ (Academy of Motion Picture Arts and Sciences Oscar) ನಾಮನಿರ್ದೇಶನದ ವೋಟಿಂಗ್ ಅನ್ನು ಎರಡು ದಿನಗಳ ಕಾಲ ವಿಸ್ತರಿಸಿ, ಜನವರಿ 19ರಂದು ನಾಮಿನೇಷನ್ ಗಳನ್ನು ಘೋಷಿಸುವುದಾಗಿ ತಿಳಿಸಿತ್ತು.
ಆದರೆ, ಪರಿಸ್ಥಿತಿ ಕೈಮೀರಿ ಹೋಗಿರುವ ಹಿನ್ನೆಲೆಯಲ್ಲಿ ಈ ದಿನಾಂಕವನ್ನೂ ಮುಂದೂಡಲಾಗಿದೆ. ಜನವರಿ 23ರಂದು ಯಾವುದೇ ಸುದ್ದಿಗೋಷ್ಠಿ ಅಥವಾ ಕಾರ್ಯಕ್ರಮ ನಡೆಸದೇ, ವರ್ಚುವಲ್ ಆಗಿ ನಾಮಿನೇಷನ್ ಗಳನ್ನು ಘೋಷಣೆ ಮಾಡುವುದಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಲ್ ಕ್ರ್ಯಾಮರ್ ತಿಳಿಸಿದ್ದಾರೆ. ಕಾಡ್ಗಿಚ್ಚಿನಿಂದಾಗಿರುವ ವಿನಾಶ ಮತ್ತು ನಷ್ಟವು ಬಹಳ ದುಃಖ ತರಿಸಿದೆ. ಇಂಥ ಸವಾಲಿನ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.

ಈಗಾಗಲೇ ಪ್ರಾಕೃತಿಕ ವಿಕೋಪವು ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಅಡ್ಡಿಯುಂಟುಮಾಡಿದೆ. ವಿಶ್ಲೇಷಕರ ಆಯ್ಕೆ ಪ್ರಶಸ್ತಿ, ನಿರ್ಮಾಪಕರ ಗಿಲ್ಡ್ ಪ್ರಶಸ್ತಿಯ ವಿಜೇತರ ಆಯ್ಕೆ ಕಾರ್ಯಕ್ರಮವೂ ರದ್ದಾಗಿದೆ. ಇದಲ್ಲದೇ, ಸಸ್ಸೆಕ್ಸ್ ರಾಜಕುಮಾರಿ ಮೇಘನ್(Meghan, Princess of Sussex) ಅವರ ನೆಟ್ ಫ್ಲಿಕ್ಸ್ ಸರಣಿ “ಲವ್, ಮೇಘನ್” ಬಿಡುಗಡೆಯನ್ನೂ ಮುಂದೂಡಲಾಗಿದೆ. ಜ.15ಕ್ಕೆ ಇದ್ದ ರಿಲೀಸ್ ದಿನಾಂಕವನ್ನು ಮಾರ್ಚ್ 4ಕ್ಕೆ ನಿಗದಿಪಡಿಸಲಾಗಿದೆ.
ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು ದಿನೇ ದಿನೇ ವ್ಯಾಪಕವಾಗಿ ಹಬ್ಬುತ್ತಿದ್ದು, ಈಗಾಗಲೇ 24 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡು ರೋದಿಸುತ್ತಿದ್ದಾರೆ. ಸೆಲೆಬ್ರಿಟಿಗಳೇ ಅಧಿಕವಾಗಿರುವ ಪ್ರದೇಶಗಳೂ ಅಗ್ನಿಗಾಹುತಿಯಾಗಿವೆ. ಖ್ಯಾತ ನಟರಾದ ಮೆಲ್ ಗಿಬ್ಸನ್,(Mel Gibson)ಮೈಲ್ಸ್ ಟೆಲ್ಲರ್, ಜೆಫ್ ಬ್ರಿಡ್ಜಸ್ (Jeff Bridges) ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಮನೆಗಳು ಸುಟ್ಟು ಬೂದಿಯಾಗಿವೆ.