ವಿಜಯನಗರ: ಟೋಲ್ ನಲ್ಲಿ ನಿಂತಿದ್ದ ಬೊಲೆರೋ ಪಿಕಪ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ತಿಮಲಾಪುರ ಟೋಲ್ ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಚಾಲಕ ಈರಣ್ಣ (37) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಆಲಮಟ್ಟಿಯಿಂದ ಮೈಸೂರಿಗೆ ದಾಳಿಂಬೆ ತುಂಬಿಕೊಂಡು ತೆರಳುತ್ತಿತ್ತು. ಟೋಲ್ ನಲ್ಲಿ ಬೊಲೆರೋ ವಾಹನದ ಚಾಲಕ ಹಣ ಪಾವತಿ ಮಾಡುತ್ತಿದ್ದ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಹಿಂದಿನಿಂದ ಗುದ್ದಿದೆ. ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಗೊಂಡವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.