ಚೆನ್ನೈ: ಪ್ರಸಿದ್ಧ ಗೀತರಚನೆಕಾರ ಮತ್ತು ತಮಿಳು ಕವಿ ವೈರಮುತ್ತು ಅವರು ಶ್ರೀರಾಮನ ಕುರಿತು ನೀಡಿದ ಹೇಳಿಕೆ ತಮಿಳುನಾಡಿನಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಂಬ ರಾಮಾಯಣದ ಕರ್ತೃ, ಪ್ರಾಚೀನ ತಮಿಳು ಕವಿ ಕಾಂಬರ್ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ವೈರಮುತ್ತು ಅವರು ಭಾಷಣ ಮಾಡುವ ವೇಳೆ ಈ ವಿವಾದಿತ ಹೇಳಿಕೆ ನೀಡಿದ್ದಾರೆ.
ಕಂಬ ರಾಮಾಯಣದಲ್ಲಿನ ಒಂದು ಸನ್ನಿವೇಶವನ್ನು ಉಲ್ಲೇಖಿಸಿ, “ಸೀತೆಯನ್ನು ಕಳೆದುಕೊಂಡ ನಂತರ ರಾಮನು ಹುಚ್ಚನಂತಾಗಿದ್ದ” ಎಂದು ವೈರಮುತ್ತು ಹೇಳಿದ್ದಾರೆ. ಈ ಹೇಳಿಕೆಯು ವ್ಯಾಪಕ ಟೀಕೆಗೆ ಗುರಿಯಾಗಿದೆ.
ತಮ್ಮ ಭಾಷಣದಲ್ಲಿ ವೈರಮುತ್ತು ಅವರು, ಕಂಬ ರಾಮಾಯಣದಲ್ಲಿ ಬರುವ ಸನ್ನಿವೇಶವನ್ನು ತಿಳಿಸುತ್ತಾ, ವನವಾಸದ ಸಮಯದಲ್ಲಿ ರಾಮನ ನಡವಳಿಕೆ ಬಗ್ಗೆ ವಾಲಿ ಪ್ರಶ್ನಿಸಿದ್ದನ್ನು ವಿವರಿಸಿದ್ದಾರೆ. “ರಾಮನು ತನ್ನ ಸಹೋದರನಾದ ಭರತನಿಗಾಗಿ ತನ್ನ ರಾಜ್ಯವನ್ನೇ ತ್ಯಜಿಸಿದನು. ಆದರೆ, ಕಾಡಿನಲ್ಲಿ ವಾಲಿಯ ರಾಜ್ಯವನ್ನು ವಾಲಿಯ ಸಹೋದರ ಸುಗ್ರೀವನಿಗೆ ಏಕೆ ನೀಡಿದ?” ಎಂಬ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ವಾಲಿಯು “ಸೀತೆಯನ್ನು ಕಳೆದುಕೊಂಡ ಕಾರಣ ರಾಮನು ತನ್ನ ಮನಸ್ಸಿನ ಸ್ಥಿಮಿತವನ್ನೂ ಕಳೆದುಕೊಂಡಿದ್ದ. ಹಾಗಾಗಿ ಆತನ ಈ ಕಾರ್ಯಗಳನ್ನು ನಾವು ಕ್ಷಮಿಸಬೇಕಾಗುತ್ತದೆ” ಎಂದು ಹೇಳುತ್ತಾನೆ ಎಂದು ವೈರಮುತ್ತು ವಿವರಿಸಿದ್ದಾರೆ.

ತನ್ನ ವಾದವನ್ನು ಮುಂದುವರಿಸಿದ ವೈರಮುತ್ತು, “ಭಾರತೀಯ ದಂಡ ಸಂಹಿತೆ (IPC) ಯ ಸೆಕ್ಷನ್ 84 ಪ್ರಕಾರ, ಬುದ್ಧಿಭ್ರಮಣೆಯಾದ ವ್ಯಕ್ತಿಯು ಮಾಡಿದ ಕೃತ್ಯವು ಅಪರಾಧವಲ್ಲ. ಕಾಂಬರ್ ಅವರಿಗೆ ಐಪಿಸಿ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಅವರಿಗೆ ಸಮಾಜದ ಬಗ್ಗೆ ಆಳವಾದ ಅರಿವಿತ್ತು” ಎಂದೂ ಹೇಳಿದ್ದಾರೆ. ಈ ಅರ್ಥದಲ್ಲಿ, ರಾಮನು “ಕ್ಷಮಿಸಲ್ಪಟ್ಟ ಮತ್ತು ಖುಲಾಸೆಗೊಂಡ ಆರೋಪಿ”ಯಾಗಿ ಮನುಷ್ಯನಾದ, ಆದರೆ ಕಾಂಬನ್ “ದೇವರಾದನು” ಎಂದು ವೈರಮುತ್ತು ಹೇಳಿದರು. ಅವರ ಈ ಹೋಲಿಕೆ ಮತ್ತು ವ್ಯಾಖ್ಯಾನಗಳು ತಮಿಳುನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಪ್ರಶಸ್ತಿ ವೇದಿಕೆಯಲ್ಲಿ ಇಂತಹ ಹೇಳಿಕೆ ನೀಡಿರುವುದಕ್ಕೆ ಹಲವರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.