ರಾಂಚಿ : ಪರೀಕ್ಷೆ ಎಂದ ಕೂಡಲೇ ಸಾವಿರಾರು ವಿದ್ಯಾರ್ಥಿಗಳು, ಹಲವು ಶಿಕ್ಷಕರು, ನೂರಾರು ಕೊಠಡಿಗಳು ಕಣ್ಣಮುಂದೆ ಬರುತ್ತವೆ. ಆದರೆ ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ನಡೆದ ಮೆಟ್ರಿಕ್ಯುಲೇಶನ್ (10ನೇ ತರಗತಿ) ಪರೀಕ್ಷೆಯೊಂದು ಇಡೀ ರಾಜ್ಯದ ಗಮನ ಸೆಳೆದಿದೆ. ಕಾರಣ, ಅಲ್ಲಿ ಪರೀಕ್ಷೆ ಬರೆಯಲು ಬಂದಿದ್ದು ಕೇವಲ ಒಬ್ಬನೇ ಒಬ್ಬ ವಿದ್ಯಾರ್ಥಿ.. ಆದರೆ ಆತನಿಗೆ ಒದಗಿಸಲಾದ ಭದ್ರತೆ ಮತ್ತು ವ್ಯವಸ್ಥೆಗಳನ್ನು ನೋಡಿದರೆ ಯಾವುದೋ ವಿಐಪಿಯೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರೇ ಎಂಬ ಪ್ರಶ್ನೆ ಮೂಡುವಂತಿತ್ತು.
ರಾಮಕಂದ ಬ್ಲಾಕ್‌ನ ಹರ್ಹೆಯಲ್ಲಿರುವ ಸರ್ಕಾರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶಂಕರ್ ಕುಮಾರ್ ಸಿಂಗ್ ಎಂಬ ವಿದ್ಯಾರ್ಥಿ ‘ಸಂಗೀತ’ (Music) ವಿಷಯದ ಪರೀಕ್ಷೆ ಬರೆಯಲು ಹಾಜರಾಗಿದ್ದ. ಈ ಕೇಂದ್ರದಲ್ಲಿ ಒಟ್ಟು 406 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರೂ, ಸಂಗೀತ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದವನು ಶಂಕರ್ ಒಬ್ಬನೇ. ನಿಯಮದ ಪ್ರಕಾರ ಆತನಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಹೈ-ವೋಲ್ಟೇಜ್ ಭದ್ರತೆ ಮತ್ತು ಕಣ್ಗಾವಲು
ಒಬ್ಬನೇ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದರೂ, ಆಡಳಿತ ಮಂಡಳಿಯು ನಿಯಮಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯ ಜೊತೆಗೆ, ಇಡೀ ಪ್ರಕ್ರಿಯೆಯ ಉಸ್ತುವಾರಿಗೆ ಒಬ್ಬ ಮ್ಯಾಜಿಸ್ಟ್ರೇಟ್ (ದಂಡಾಧಿಕಾರಿ), 18 ಮಂದಿ ಮೇಲ್ವಿಚಾರಕ ಸಿಬ್ಬಂದಿ ಹಾಗೂ ಭದ್ರತೆಗಾಗಿ 12 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜಿಲ್ಲೆಯಾದ್ಯಂತ ಇದೀಗ ದೊಡ್ಡ ಚರ್ಚೆಯ ವಿಷಯವಾಗಿದೆ.
ನಿಯಮ ಪಾಲನೆಯಲ್ಲಿ ಅಧಿಕಾರಿಗಳ ಬದ್ಧತೆ
ಕೇಂದ್ರದ ಮೇಲ್ವಿಚಾರಕ ಹರ್ಷ್ ಜ್ಯೋತಿ ಶುಕ್ಲಾ ಈ ಬಗ್ಗೆ ಮಾತನಾಡಿ, “ವಿದ್ಯಾರ್ಥಿಗಳ ಸಂಖ್ಯೆ ಎಷ್ಟೇ ಇರಲಿ, ಪರೀಕ್ಷೆಯ ಪಾವಿತ್ರ್ಯತೆ ಮತ್ತು ನಿಯಮಗಳನ್ನು ಕಾಪಾಡುವುದು ನಮ್ಮ ಕರ್ತವ್ಯ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು,” ಎಂದಿದ್ದಾರೆ. ಸೋಮವಾರ ನಡೆದ ಸಂಸ್ಕೃತ ಪರೀಕ್ಷೆಯೊಂದಿಗೆ ಈ ಕೇಂದ್ರದಲ್ಲಿ ಎಲ್ಲಾ ವಿಷಯಗಳ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಆದರೆ ಈ ‘ಮ್ಯೂಸಿಕ್ ಎಕ್ಸಾಮ್’ ಮಾತ್ರ ಜಾರ್ಖಂಡ್ ಪರೀಕ್ಷಾ ಇತಿಹಾಸದಲ್ಲಿ ಒಂದು ವಿಶಿಷ್ಟ ದಾಖಲೆಯಾಗಿ ಉಳಿದಿದೆ.
ಇದನ್ನೂ ಓದಿ : ‘ಲೋಕಾ’ ತನಿಖೆ ಎದುರಿಸುತ್ತಿರುವ ಹೆಚ್.ಸಿ. ಸತ್ಯನ್‌ಗೆ ‘ನಾಡೋಜ ಪ್ರಶಸ್ತಿ’ ನೀಡಬೇಡಿ | ಹಂಪಿ ವಿವಿಗೆ ದಿನೇಶ್ ಕಲ್ಲಹಳ್ಳಿ ಪತ್ರ



















