ಶಿವಮೊಗ್ಗ: ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಶಿವಮೊಗ್ಗ ತಾಲೂಕಿನ ಸಕ್ರೆಬೈಲ್ ಸುತ್ತಮುತ್ತ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಸಕ್ರೆಬೈಲ್ ಸುತ್ತಮುತ್ತ ಈ ಒಂಟಿ ಸಲಗ ಉಪದ್ರವ ಮಾಡುತ್ತಿದ್ದು, ರೈತರು ಬೆಳೆದ ತೆಂಗು ಹಾಗೂ ಬಾಳೆಗಿಡಗಳನ್ನು ನಾಶ ಮಾಡಿದೆ.
ಆನೆಯ ಓಡಾಟವನ್ನು ವಿಡಿಯೋದಲ್ಲಿ ಸೆರೆ ಹಿಡಿದಿರುವ ಸಾರ್ವಜನಿಕರು, ಅದನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಯಾವುದಕ್ಕೂ ಬಗ್ಗದ ಸಲಗ ತೋಟದಲ್ಲಿ ಕಂಡ ವಸ್ತುಗಳನ್ನು ತಿನ್ನುತ್ತಾ ನದಿಯಲ್ಲಿ ಈಜುತ್ತಾ ಆನೆ ನಡೆದಿದ್ದೇ ದಾರಿ ಎಂಬಂತೆ ಓಡಾಡುತ್ತಿದೆ.
ಈ ಹಿಂದೆಯೂ ಸಹ ಅನೇಕ ಕಾಡಾನೆಗಳು ಭದ್ರಾ ಅಭಯಾರಣ್ಯದಿಂದ ನದಿ ದಾಟಿ ಈಚೆಗೆ ಬಂದಿದ್ದವು. ಕಳೆದ ತಿಂಗಳು ಸಹ ಸಕಲೇಶಪುರದಿಂದ ರೇಡಿಯೋ ಕಾಲರ್ ಅಳವಡಿಸಿರುವ ಆನೆಯೊಂದು ಬಂದಿತ್ತು. ಬಳಿಕ ಸಕ್ರೆಬೈಲ್‌ನ ಕುಮ್ಕಿ ಆನೆಗಳ ಸಹಾಯದಿಂದ ಅದನ್ನು ಸೆರೆಹಿಡಿಯಲಾಗಿತ್ತು. ಇದೀಗ ಮತ್ತೊಂದು ಆನೆ ಪ್ರತ್ಯಕ್ಷವಾಗಿದ್ದು, ರೈತರಿಗೆ ಸಂಕಟವಾಗಿ ಪರಿಣಮಿಸಿದೆ. ಆನೆಯನ್ನು ಕೂಡಲೇ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.