ಬೆಂಗಳೂರು : ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯದ ಒಟ್ಟು ಎಂಟು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಬೆಂಗಳೂರು, ಹಾಸನ, ಉಡುಪಿ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಕಲಬುರ್ಗಿ, ಬಾಗಲಕೋಟೆಯಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಪೊಲೀಸರು ರೇಡ್ ಮಾಡಿ ಶೋಧ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮೂರು ಭ್ರಷ್ಟಾತೀಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ ನಡೆಸಿದೆ. ಮಲ್ಲಸಂದ್ರದ ಮೆಟರ್ನಿಟಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಮಂಜುನಾಥ್ ಜಿ, ಕರ್ನಾಟಕ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (KSEEB) ಡೈರೆಕ್ಟರ್ ವಿ. ಸುಮಂಗಲ, BMRCL ವಿಶೇಷ ಭೂಸ್ವಾಧೀನಾ ಸರ್ವೇಯರ್ ಎನ್ ಕೆ ಗಂಗ ಮಾರಿಗೌಡ ಮನೆ ಮೇಲೆ ಲೋಕಾ ರೇಡ್ ಮಾಡಿದೆ.

ಚಿತ್ರದುರ್ಗ | ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಹೊಳಲ್ಕೆರೆ ಕೃಷಿ ಇಲಾಖೆ ಅಸಿಸ್ಟೆಂಟ್ ಡೈರೆಕ್ಟರ್ ಚಂದ್ರಕುಮಾರ್ಗೆ ಸೇರಿದ 2 ಮನೆ, ಕಚೇರಿ ಮೇಲೆ ಲೋಕಾ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಲೋಕಾ ಅಧಿಕಾರಿಗಳು ಚಿತ್ರದುರ್ಗದ ಕೃಷಿ ಇಲಾಖೆ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಿದ್ದಾರೆ. ಹೊಳಲ್ಕೆರೆ ತಾಲೂಕಿನ ಟಿ. ನುಲೇನೂರು ಗ್ರಾಮದ ಮನೆಯಲ್ಲೂ ಶೋಧ ನಡೆಸಿದ್ದು, ಲೋಕಾಯುಕ್ತ ಎಸ್ಪಿ ವಾಸುದೇವ್ ರಾಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಬೀದರ್ನಲ್ಲಿಯೂ ಲೋಕಾ ದಾಳಿ | ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬೀದರ್ ಭ್ರಷ್ಟರ ಮೇಲೆ ಲೋಕಾದಾಳಿ ನಡೆಸಿದ್ದು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ದೂಳಪ್ಪ ನಿವಾಸ ಮೇಲೆ ದಾಳಿ ಮಾಡಿದ್ದಾರೆ. ಬೀದರ್ ನಗರದ ಗುರುನಾನಕ್ ಕಾಲೋನಿಯಲ್ಲಿರುವ ದೂಳಪ್ಪ ಮನೆ, ಭಾಲ್ಕಿಯ ಕಡ್ಯಾಳ, ಔರಾದ್ನ ಎಡಿ ಆಫೀಸ್, ಮತ್ತು ಮುದೋಳ ಕಚೇರಿಯ ಮೇಲೆ ರೇಡ್ ಮಾಡಲಾಗಿದೆ. ಕೃಷಿ ಇಲಾಖೆಯ ನಿರ್ದೇಶಕ ದೂಳಪ್ಪ ಮೇಲೆ ಹಲವು ಭ್ರಷ್ಟಾಚಾರ ದೂರುಗಳು ದಾಖಲಾಗಿದ್ದು, ದೂರು ಬಂದ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಿ ನಿವಾಸದಲ್ಲಿ ದಾಖಲೆಗಳ ತೀವ್ರ ಪರಿಶೀಲನೆ ನಡೆಸಿದ್ದಾರೆ. ದಾಳಿ ಸ್ಥಳಕ್ಕೆ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಭೇಟಿ ನೀಡಿದ್ದಾರೆ.
ಹಾವೇರಿಯಲ್ಲೂ ಲೋಕಾ ದಾಳಿ | ಹಾವೇರಿ ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ಲೋಕಾಯುಕ್ತರ ದಾಳಿ ನಡೆಸಿದೆ. ರಾಣೇಬೆನ್ನೂರು ಪಟ್ಟಣದಲ್ಲೇ ಪ್ರತ್ಯೇಕ ಎರಡು ಕಡೆಗಳಲ್ಲಿ ಲೋಕಾ ರೇಡ್ ಮಾಡಿದೆ. ಬಸವರಾಜ್ ಸೀಡೆನೂರು, ಅಶೋಕ್ ಅರಳೇಶ್ವರ, ಸವಣೂರು ತಾಲೂಕು ಪಂಚಾಯತ್ ಭ್ರಷ್ಟ ಇಓ ಬಸವರಾಜ್ ಸೀಡೆನೂರು, ಇಒ ಬಸವರಾಜ್ಗೆ ಸೇರಿದ ಬೀರೆಶ್ವರ ನಗರದಲ್ಲಿರೋ ಮನೆ ಮೇಲೆ ಲೋಕಾ ರೇಡ್ ಮಾಡಿದೆ. ರಾಣೇಬೆನ್ನೂರು ರೆವೆನ್ಯೂ ಇನ್ಸ್ಪೆಕ್ಟರ್ ಅಶೋಕ್ ಅರಳೇಶ್ವರ ಮನೆಯಲ್ಲಿ ಲೋಕಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ರಾಣೇಬೆನ್ನೂರು ಪಟ್ಟಣದಲ್ಲಿರೋ ಅಶೋಕ್ ಸಂಬಂಧಿಕರ ಮನೆ ಮೇಲೂ ರೇಡ್ ಮಾಡಿದ್ದಾರೆ. ಸುಮಾರು 10 ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ.


ಉಡುಪಿ | ಉಡುಪಿಯ ಆರ್‌ಟಿಓ ಅಧಿಕಾರಿ ಲಕ್ಷ್ಮೀನಾರಾಯಣ ಪಿ ನಾಯಕ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ನಗರದ ಕಿನ್ನಿಮುಲ್ಕಿ ಫ್ಲ್ಯಾಟ್‌ನಲ್ಲಿ ಶೋಧ ನಡೆಸುತ್ತಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ಕುಮಟಾದ ಲಕ್ಷ್ಮೀ ನಾರಾಯಣ ಪಿ. ನಾಯಕ್ ವಿರುದ್ದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕುಮುಟಾ ಹಾಗೂ ಪಡುಅಲೆವೂರುನಲ್ಲಿರುವ ಸಂಬಂಧಿಕರ ಮನೆಗಳಲ್ಲೂ ಸರ್ಚ್ ಮಾಡಲಾಗುತ್ತಿದೆ.
ದಾವಣಗೆರೆಯಲ್ಲೂ ದಾಳಿ : ದಾವಣಗೆರೆಯಲ್ಲೂ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಬೆವರಿಳಿಸಿದ್ದಾರೆ. ನಗರದ ಶಿವಕುಮಾರ್ ಸ್ವಾಮಿ ಬಡಾವಣೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿ, ದಾವಣಗೆರೆಯಲ್ಲಿ ನಡುವಿನಮನೆ ಎಂಬ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸರಸ್ವತಿ ನಗರದಲ್ಲಿರುವ ಎಸ್ ಡಿಎ ನಡುವಿನಮನೆ ಮನೆ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಕೌಲಾಪುರೆ ರೇಡ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ದಾವಣಗೆರೆಯ ಕೆಆರ್ಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ್ ಮೇಲೂ ಲೋಕಾ ರೇಡ್ ಮಾಡಿದೆ. ದಾವಣಗೆರೆ ಕೆಆರ್ಡಿಎಲ್ ಭ್ರಷ್ಟ ಸಹಾಯಕ ಇಂಜಿನಿಯರ್ ಜಗದೀಶ್ ನಿವಾಸ, ಶಿವಮೊಗ್ಗದಲ್ಲಿರುವ ಜಗದೀಶ್ ನಾಯ್ಕ್ ಮನೆ ಪರಿಶೀಲನೆ ಮಾಡಿದ್ದಾರೆ. ಜಗದೀಶ ನಾಯ್ಕ್ ಶಿವಮೊಗ್ಗದಲ್ಲಿ ಮೂರು ಕಡೆ ಮನೆ ಹೊಂದಿದ್ದು, ಅವರ ದಾವಣಗೆರೆಯ ಬಳಿ ಇರುವ ಎಪಿಎಂಸಿ ಕಚೇರಿ ಮೇಲೂ ಲೋಕಾ ರೇಡ್ ನಡೆಸಿದೆ.