ಬೆಂಗಳೂರು:ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಕ್ರಮ ಮುಂದುವರಿಸಿರುವ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ನಡೆದ ಈ ದಾಳಿಯಲ್ಲಿ ಮೂರಕ್ಕೂ ಹೆಚ್ಚು ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿರುವ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ತಂಡಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿವೆ. ದಾಳಿ ನಡೆದ ಪ್ರಮುಖ ಅಧಿಕಾರಿಗಳಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯ ಮುಖ್ಯ ಇಂಜಿನಿಯರ್ ವಸಂತ್ ವಿ. ನಾಯಕ್ ಅವರ ಬೆಂಗಳೂರು ನಿವಾಸವೂ ಸೇರಿದೆ.
ಇದೇ ವೇಳೆ ಯಾದಗಿರಿ ಜಿಲ್ಲೆಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ, ಮಂಡ್ಯದ ಲೋಕೋಪಯೋಗಿ ಇಲಾಖೆ (PWD) ಉಪವಿಭಾಗದ ಎಎಇ ಎಸ್. ಸತೀಶ್, ಧಾರವಾಡ ಜಿಲ್ಲೆಯ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ. ಸುರಕೋಡ ಅವರ ನಿವಾಸಗಳ ಮೇಲೂ ದಾಳಿ ನಡೆದಿದೆ.
ಹಾಸನ ಮಹಾನಗರ ಪಾಲಿಕೆಯಲ್ಲಿ ಎಎಇ ಆಗಿರುವ ಎಂ.ಸಿ. ಸತ್ಯನಾರಾಯಣ, ಮೈಸೂರಿನ ಜಲಭವನದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಎಇ ಹಾಗೂ ಇಇ (ಇನ್‌ಚಾರ್ಜ್) ಆಗಿರುವ ಆಸಿಫ್ ಇಕ್ಬಾಲ್ ಅವರ ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.
ಇದರ ಜೊತೆಗೆ ವಿಜಯಪುರ ಜಿಲ್ಲೆಯ ಕೃಷ್ಣಾ ಭಾಗ್ಯ ಜಲ ನಿಗಮದ ಕಿರಿಯ ಇಂಜಿನಿಯರ್ ಪ್ರಕಾಶ್ ಪಿ.ಜಿ., ಯಲಹಂಕದ ಸಿಂಗನಾಯಕನಹಳ್ಳಿಯ ರೈತ ಸೇವಾ ಸಹಕಾರ ಸಂಘದ ಸಿಇಒ ಆರ್. ಶಶಿಧರ್ ಹಾಗೂ ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹೆಚ್.ಸಿ. ಇಂದ್ರೇಶ್ ಅವರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ದಾಳಿಯ ವೇಳೆ ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಕುರಿತು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ : ಪವರ್ ಫೈಟ್ ನಡುವೆ ಸಿಎಂ ಸಿದ್ದು ಸ್ಟೇಟ್ ಬಜೆಟ್ : ಯುಗಾದಿ ಗಿಫ್ಟ್ ನಿರೀಕ್ಷೆಯಲ್ಲಿ ರಾಜ್ಯದ ಜನತೆ



















