ಬೆಂಗಳೂರು: ಇಂದು FLAG DAY ಹಿನ್ನೆಲೆಯಲ್ಲಿ ಸಿಎಂ ಮೆಡಲ್ ಪಡೆಯಬೇಕಿದ್ದ ಇನ್ ಪೆಕ್ಟರ್ ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ದಾಳಿ ನಡೆಯುತ್ತಿದ್ದಂತೆ ಪರಾರಿಯಾಗಿದ್ದಾರೆ. ಸಿಎಂ ಮೆಡಲ್ ಗೆ ಆಯ್ಕೆಯಾಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಲು ಹೋಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಬಾವಿಯ ಖಾಸಗಿ ಹೊಟೇಲ್ ನಲ್ಲಿ ಡೀಲ್ ಮಾಡುವ ವೇಳೆ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಇಂದು ಬೆಳಗ್ಗೆ ಲೋಕಾ ದಾಳಿ ನಡೆಸಿದೆ. ಹೆಡ್ ಕಾನ್ಸ್ ಸ್ಟೇಬಲ್ ಉಮೇಶ್ ( SB), ಪೊಲೀಸ್ ಕಾನ್ ಸ್ಟೇಬಲ್ ಅನಂತ್ ಲೋಕಾ ಬಲೆಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಠಾಣೆಯ ಸಿಬ್ಬಂದಿಗಳನ್ನು ಹಾಗೂ ಸಿಕ್ಕಿಬಿದ್ದ ಸಿಬ್ಬಂದಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಘಟನೆ?
ಗುತ್ತಿಗೆದಾರ ಚೆನ್ನೇಗೌಡ ಹಾಗೂ ಕುಟುಂಬಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಸುಳ್ಳು ಕೇಸ್ ಹಾಕಿ ಚನ್ನೇಗೌಡರ ನಾಲ್ಕು ಕೋಟಿ ರೂ. ಮೌಲ್ಯದ ಮನೆಯನ್ನು ತಾನು ಹೇಳಿದವರಿಗೆ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್ ಪೆಕ್ಟರ್ ಕಿರುಕುಳ ಕೊಟ್ಟಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು, ಅವರಿಗೂ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು.
ಅಲ್ಲದೇ, ಹಿಂದೆ ದಾಖಲಾಗಿದ್ದ ಕೇಸ್ ಗೆ ಬಿ ರಿಪೋರ್ಟ್ ಹಾಕುತ್ತೇನೆ. ಮನೆಯನ್ನು ಬರೆದುಕೊಡಿ ಎಂದು ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದರು. ಬೆದರಿಕೆ ಹಾಕಿರುವ ವಿಡಿಯೋವನ್ನು ಕೂಡ ಚನ್ನೇಗೌಡ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ಲೋಕಾ ದಾಳಿ ನಡೆಸಿದ್ದು, ಇನ್ಸ್ ಪೆಕ್ಟರ್ ಪರಾರಿಯಾಗಿದ್ದಾರೆ.