ಕೇಂಜಾರ್, ಒಡಿಶಾ: ಶಾಲಾ ಶಿಕ್ಷಕರ ಘೋರ ನಿರ್ಲಕ್ಷ್ಯದಿಂದಾಗಿ 8 ವರ್ಷದ ಬಾಲಕಿಯೊಬ್ಬಳು ರಾತ್ರಿಯಿಡೀ ತರಗತಿಯಲ್ಲೇ ಬಂಧಿಯಾಗಿದ್ದು, ಹೊರಬರಲು ಯತ್ನಿಸಿ ಕಿಟಕಿಯ ಸರಳುಗಳ ನಡುವೆ ತಲೆ ಸಿಲುಕಿಕೊಂಡು ನರಳಾಡಿದ ಮನಕಲಕುವ ಘಟನೆ ಒಡಿಶಾದ ಕೇಂಜಾರ್ ಜಿಲ್ಲೆಯಲ್ಲಿ ನಡೆದಿದೆ.

ಬನ್‌ಸ್ಪಾಲ್ ಬ್ಲಾಕ್‌ನ ಅಂಜಾರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಜ್ಯೋತ್ಸ್ನಾ ದೇಹುರಿ, ಗುರುವಾರ ಸಂಜೆ 4 ಗಂಟೆಗೆ ಶಾಲೆ ಮುಗಿದ ನಂತರ ತರಗತಿಯಲ್ಲೇ ನಿದ್ರೆಗೆ ಜಾರಿದ್ದಾಳೆ. ಇದನ್ನು ಗಮನಿಸದ ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು, ಕೊಠಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ.
ಬಾಲಕಿ ಮನೆಗೆ ಬಾರದ್ದನ್ನು ಕಂಡು ಆತಂಕಗೊಂಡ ಪೋಷಕರು ರಾತ್ರಿಯಿಡೀ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಇತ್ತ, ತರಗತಿಯಲ್ಲಿ ಏಕಾಂಗಿಯಾಗಿದ್ದ ಜ್ಯೋತ್ಸ್ನಾ ನಿದ್ದೆಯಿಂದ ಎಚ್ಚೆತ್ತಾದ ಬೆಚ್ಚಿಬಿದ್ದಿದ್ದಾಳೆ. ತರಗತಿಯಲ್ಲಿ ಯಾರೂ ಇಲ್ಲ, ಬಾಗಿಲೂ ಹಾಕಿದೆ. ಹೊರಗೆ ಕತ್ತಲಾಗಿದೆ. ಭಯಭೀತಳಾದ ಬಾಲಕಿ ಕೊನೆಗೆ ಕಿಟಕಿಯ ಮೂಲಕ ಹೊರಬರಲು ಪ್ರಯತ್ನಿಸಿದ್ದಾಳೆ. ಆದರೆ, ಆಕೆಯ ದೇಹವು ಸರಳುಗಳ ನಡುವೆ ನುಸುಳಿದರೂ, ತಲೆ ಮಾತ್ರ ಸಿಕ್ಕಿಹಾಕಿಕೊಂಡಿದೆ. ಆ ಕಿಟಕಿಯಲ್ಲಿ ಸಿಲುಕಿಕೊಂಡೇ ಆಕೆ ರಾತ್ರಿಯಿಡೀ ಕಳೆದಿದ್ದಾಳೆ.

ಶುಕ್ರವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಶಾಲೆಯ ಅಡುಗೆಯವರು ತರಗತಿಯ ಬಾಗಿಲು ತೆರೆದಾಗ, ಕಿಟಕಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಸೇರಿ ಕಬ್ಬಿಣದ ಸರಳುಗಳನ್ನು ಬಗ್ಗಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿಯನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಶಾಲೆಯ ಹಂಗಾಮಿ ಮುಖ್ಯೋಪಾಧ್ಯಾಯ ಗೌರಹರಿ ಮಹಾಂತ ಅವರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಿದೆ. ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆಯು ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾಳೆ ಎಂದು ತಿಳಿಸಿದೆ.



















