ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿ ನಗರಗಳಲ್ಲಿ ಮಾಡುವ ಕೆಲಸ ಬೇಜಾರು ತಂದಿರುತ್ತದೆ. ಕೆಲಸ ಮಾಡಿದ್ದರಿಂದ ಬಂದ ಸಂಬಳವು ಯಾವುದಕ್ಕೂ ಸಾಲುವುದಿಲ್ಲ. ಹಾಗಾಗಿ, ಉದ್ಯಮ ಆರಂಭಿಸಬೇಕು, ಸ್ವಂತ ಬಿಸಿನೆಸ್ ಸ್ಟಾರ್ಟ್ ಮಾಡಬೇಕು ಎಂಬುದು ತುಂಬ ಜನರ ಕನಸಾಗಿರುತ್ತದೆ. ಆದರೆ, ಉದ್ಯಮ ಆರಂಭಿಸಲು ಹೆಚ್ಚಿನ ಯುವಕರ ಬಳಿ ಬಂಡವಾಳ ಇರುವುದಿಲ್ಲ. ಆದರೆ, ಬಿಸಿನೆಸ್ ಆರಂಭಿಸುವವರಿಗೆ ಹಣಕಾಸು ನೆರವು, ಸಾಲ ನೀಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡರೆ, ನೀವೂ ಬಿಸಿನೆಸ್ ಆರಂಭಿಸಬಹುದಾಗಿದೆ. ಅಂತ ಯೋಜನೆಗಳ ಪಟ್ಟಿ ಇಲ್ಲಿದೆ.
- ಮುದ್ರಾ ಯೋಜನೆ
ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಗಳನ್ನು (ಎಂಎಸ್ ಎಂಇ) ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದೆ. ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ತೊಡಗಿರುವ ಆದಾಯ ಗಳಿಸುವ ಚಟುವಟಿಕೆಗಳಿಗೆ ಸರ್ಕಾರವು 20 ಲಕ್ಷ ರೂ.ಗಳವರೆಗೆ ಸಾಲ ನೀಡುತ್ತದೆ. ಈ ಯೋಜನೆಯು ಕೋಳಿ ಸಾಕಣೆ, ಡೇರಿ, ಜೇನು ಸಾಕಣೆ ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೂಡ ಒಳಗೊಂಡಿದೆ. ಯುವಕರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. - ಎಂಎಸ್ಎಂಇ ಸಾಲ ಯೋಜನೆ
ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ10 ಲಕ್ಷ ರೂ.ನಿಂದ 5 ಕೋಟಿ ರೂ.ವರೆಗೆ ಸಾಲ ಪಡೆಯಬಹುದು. MSMEಗಳು, ಸಕಾಲಿಕ ಹಣಕಾಸು ವಿಷಯದಲ್ಲಿ ಪ್ರಮುಖ ಸವಾಲುಗಳನ್ನು ಎದುರಿಸುತ್ತವೆ. ಈ ಸಾಲವು ವಿವಿಧ ವ್ಯವಹಾರ ಅಗತ್ಯಗಳಿಗಾಗಿ ತ್ವರಿತವಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಆ ಮೂಲಕ ಇದು ಉದ್ಯಮಿಗಳಿಗೆ ನೆರವಾಗುತ್ತಿದೆ. - ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಯೋಜನೆ (ಎನ್ಎಸ್ಐಸಿ)
ಎನ್ಎಸ್ಐಸಿ ಸಣ್ಣ ಉದ್ಯಮಗಳಿಗೆ ಹಣಕಾಸು, ತಾಂತ್ರಿಕ ಮತ್ತು ಮಾರುಕಟ್ಟೆ ಬೆಂಬಲವನ್ನು ಒದಗಿಸುವ ಸರ್ಕಾರಿ ಸಂಸ್ಥೆಯಾಗಿದೆ. ಈ ಯೋಜನೆಯು ವ್ಯವಹಾರಗಳು ಮಾರುಕಟ್ಟೆಯಲ್ಲಿ ಬೆಳೆಯಲು ಮತ್ತು ಉಳಿಯಲು ಸಹಾಯ ಮಾಡುತ್ತದೆ. ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಮಾರುಕಟ್ಟೆ ಬೆಂಬಲ ಯೋಜನೆಯು ಒಕ್ಕೂಟ ಯೋಜನೆಯಾಗಿದೆ. ಟೆಂಡರ್ ಮಾರ್ಕೆಟಿಂಗ್ ಇತ್ಯಾದಿಗಳ ಮೂಲಕ ಮಾರುಕಟ್ಟೆ ಬೆಂಬಲವನ್ನು ಒದಗಿಸುತ್ತದೆ. ಇದು ಬ್ರ್ಯಾಂಡ್ ಗುರುತಿಸುವಿಕೆ, ಮಾರುಕಟ್ಟೆ ವಿಸ್ತರಣೆ ಮತ್ತು ಪ್ರಚಾರಕ್ಕೆ ಸಹಾಯ ಮಾಡುತ್ತದೆ. ಎರಡನೆಯದಾಗಿ, ಕಚ್ಚಾ ವಸ್ತುಗಳನ್ನು ಖರೀದಿಸಲು, ಬಂಡವಾಳ ಸಂಗ್ರಹಿಸಲು ಮತ್ತು ಮಾರುಕಟ್ಟೆ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವ ಕ್ರೆಡಿಟ್ ಬೆಂಬಲ ಯೋಜನೆಯಾಗಿದೆ.